ಷೇರುಪೇಟೆಯಲ್ಲಿ ಹಣ ಹೂಡಿ ಲಾಭ ಗಳಿಸುವುದು ಸುಲಭದ ಕೆಲಸವಲ್ಲ. ಅನೇಕರು ಸಾಕಷ್ಟು ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ರೂ ನಿರೀಕ್ಷಿತ ಲಾಭ ಸಿಗುವುದಿಲ್ಲ. ಜನರು ಸ್ಟಾಕ್ ಮಾರುಕಟ್ಟೆ ವ್ಯಾಪಾರಿಯಾಗಲು ಹೂಡಿಕೆ ಮತ್ತು ಷೇರು ಮಾರುಕಟ್ಟೆ ಪ್ರವೃತ್ತಿಗಳ ಬಗ್ಗೆ ಕಲಿಯಲು ಸಾಕಷ್ಟು ವರ್ಷಗಳನ್ನು ಕಳೆಯುತ್ತಾರೆ.
ಅಷ್ಟೇ ಅಲ್ಲದೇ ಲಾಭ ಗಳಿಸಲು ಎಲ್ಲಿ ಎಷ್ಟು ಹಣ ಹೂಡಿಕೆ ಮಾಡಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ಸುಲಭವಲ್ಲ. ಆದರೆ ಆಕಸ್ಮಿಕವಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಭರ್ಜರಿ ಲಾಭ ಗಳಿಸಿದ್ದಾರೆ ಎಂಬುದನ್ನ ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ ಅಲ್ಲವೇ?.
ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ತಮಗೆ ಆಸಕ್ತಿ ಇಲ್ಲದ ಸ್ಟಾಕ್‌ನಲ್ಲಿ ಹೂಡಿಕೆ ಮಾಡಿ 60 ಲಕ್ಷ ರೂಪಾಯಿ ಗಳಿಸಿದ್ದಾರೆ. ರೆಡ್ಡಿಟ್ ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು ಪೋಸ್ಟ್ ವೈರಲ್ ಆಗುತ್ತಿದೆ. ಅವರು ಆಕಸ್ಮಿಕವಾಗಿ ಸ್ಟಾಕ್ ಮಾರುಕಟ್ಟೆಯಲ್ಲಿ 1.2 ಲಕ್ಷ ಹೂಡಿಕೆ ಮಾಡಿದ್ದು 60 ಲಕ್ಷ ರೂ. ಲಾಭ ಗಳಿಸಿದ್ದಾರೆ.
“ಸುಮಾರು 15,000 ರೂಪಾಯಿಗಳ ಬಜೆಟ್‌ನ ಐಪಿಒಗಳಲ್ಲಿ” ಹೂಡಿಕೆ ಮಾಡುವುದಾಗಿ ಪೋಸ್ಟ್ ನಲ್ಲಿ ವ್ಯಕ್ತಿ ಒಪ್ಪಿಕೊಂಡಿದ್ದಾರೆ ಮತ್ತು ಸಣ್ಣ ಹೂಡಿಕೆಗಳನ್ನು ಅನುಸರಿಸಿ “ಅಪಾಯಕಾರಿ ಎಸ್‌ಎಂಇ ಐಪಿಒಗಳಿಂದ” ದೂರವಿರುವುದಾಗಿ ಹೇಳಿದ್ದಾರೆ.
ಆದರೆ ಒಂದು ದಿನ ಆಕಸ್ಮಿಕವಾಗಿ ಅವರು EKI ಎನರ್ಜಿಗಾಗಿ SME IPO ಗೆ ಅರ್ಜಿ ಸಲ್ಲಿಸಿ ತಲಾ 102 ರೂ.ನಂತೆ 1,200 ಷೇರುಗಳಿಗೆ ಅರ್ಜಿ ಸಲ್ಲಿಸಿ ಇದಕ್ಕಾಗಿ ಒಟ್ಟು 1,22,400 ರೂ. ಗಳನ್ನು ಹೂಡಿಕೆ ಮಾಡಿರುವುದಾಗಿ ತಿಳಿದಿದ್ದಾರೆ. ಆದರೆ ಅಸಲಿಗೆ ಆಗಿದ್ದೇ ಬೇರೆ. ನನ್ನ ಬ್ಯಾಂಕ್ ಖಾತೆಯಿಂದ ಎಷ್ಟು ಹಣ ಕಡಿತಗೊಂಡಿದೆ ಎಂದು ನೋಡಿದಾಗ ತಪ್ಪಾಗಿ ಅವರು ಹೆಚ್ಚು ಹಣವನ್ನು ನಮೂದಿಸಿ ಷೇರ್ ಖರೀದಿಸಿದ್ದು ಗೊತ್ತಾಗಿತ್ತು. ಈ ವೇಳೆಗೆ ಅರ್ಜಿ ವಾಪಸ್ ಪಡೆಯುವ ಕಾಲವೂ ಮೀರಿಹೋಗಿತ್ತು.
ಬಳಿಕ ಅವರು ತಮ್ಮ ಜೀವನದ ಕೆಲಸಗಳಲ್ಲಿ ಬ್ಯುಸಿಯಾಗಿ ಹೂಡಿಕೆಯ ಬಗ್ಗೆ ಮರೆತುಬಿಟ್ಟರು. ಒಂದು ದಿನ ಷೇರಿನ ಬೆಲೆ 102 ರೂ.ನಿಂದ 5,180 ರೂ.ಗೆ ಏರಿ 1,22,400 ಹೂಡಿಕೆಯ ಹಣ 60, 00,000 ಕ್ಕೆ ಏರಿತ್ತು. ಇದನ್ನು ಸ್ವತಃ ವ್ಯಕ್ತಿಯೂ ಕೂಡ ನಂಬಲು ಅಚ್ಚರಿಪಟ್ಟರು.
ನಾನು ಆಕಸ್ಮಿಕವಾಗಿ ದೊಡ್ಡ ಲಾಭವನ್ನು ಗಳಿಸಿದೆ ಎಂದು ಹೇಳಿದ್ದಾರೆ. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು ಆ ವ್ಯಕ್ತಿಯನ್ನು ಅಭಿನಂದಿಸಿ ಮತ್ತೆ ಈ ತಪ್ಪನ್ನು ಮಾಡಬಾರದು ಎಂದು ಎಚ್ಚರಿಸಿದರು.