ಕಲಬುರಗಿ: ಕಾಂಗ್ರೆಸ್ ನಾಯಕರ ಷಡ್ಯಂತ್ರದಿಂದ ಬಿಜೆಪಿ ಶಾಸಕ ಮುನಿರತ್ನ ಬಂಧಿಸಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕಾಂಗ್ರೆಸ್ ನವರಿಗೆ ಬಿಜೆಪಿಯವರಂತೆ ಷಡ್ಯಂತ್ರ ಮಾಡುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕಾಂಗ್ರೆಸ್ ಪಕ್ಷಕ್ಕೆ ಷಡ್ಯಂತ್ರ ಮಡುವ ಅಗತ್ಯವಿಲ್ಲ, ಬಿಜೆಪಿಯವರಂತೆ ಕಾಂಗ್ರೆಸ್ ಸೇಡಿನ ರಾಜಕಾರಣ, ಷಡ್ಯಂತ್ರ ಮಾಡಲು ಹೊರಟರೆ ಜೈಲುಗಳು ಸಾಕಾಗಲ್ಲ ಎಂದು ಟಾಂಗ್ ನೀಡಿದರು.
ಷಡ್ಯಂತ್ರ, ಸೇಡಿನ ರಾಜಕಾರಣ ಇದೆಲ್ಲ ಬಿಜೆಪಿಯವರ ಅಧಿಕಾರ ವೈಖರಿ. ಆದರೆ ಕಾಂಗ್ರೆಸ್ ನವರಿಗೆ ಅದರ ಅವಶ್ಯಕತೆ ಇಲ್ಲ. ರಾಜಕಾರಣಿಗಳು ಅಂದ ಮೇಲೆ ಜನ ನಮ್ಮನ್ನು ಅನುಕರಣೆ ಮಾಡುತ್ತಾರೆ. ನಮ್ಮ ಜವಾಬ್ದಾರಿ ಏನು? ಎಂಬುದನ್ನು ತಿಳಿದುಕೊಂಡು ಮಾತನಾಡಬೇಕು. ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದರು.




