ಕಲಘಟಗಿ: “ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣದ ಸಾಧನವಾಗುವ ಬಸವಣ್ಣನವರ ಅನುಭವ ಮಂಟಪದಲ್ಲಿ ಹೂಗಾರ ಮಾದಯ್ಯನವರು ಕಾಯಕ ಮತ್ತು ದಾಸೋಹವನ್ನು ಕೈಗೊಂಡು ಮಹಾನ ಶರಣರಾಗಿದ್ದರು” ಎಂದು ಪತ್ರಕರ್ತ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಪ್ರ.ಕಾರ್ಯದರ್ಶಿ ಗಿರೀಶ ಮುಕ್ಕಲ್ಲ ಹೇಳಿದರು.
ಅವರು ಪಟ್ಟಣ ಹನುಮಂತ ದೇವಸ್ಥಾನದಲ್ಲಿ ಹೂಗಾರ ಸಮಾಜವು ಆಯೋಜಿಸಿದ್ದ ಶರಣ ಹೂಗಾರ ಮಾದಯ್ಯನವರ ಜಯಂತಿಯಲ್ಲಿ ಮಾತನಾಡಿ, “ಶರಣ ಹೂಗಾರ ಮಾದಯ್ಯ ದಂಪತಿ ವಿಶ್ವಗುರು ಬಸವಣ್ಣನವರ ಕಲ್ಯಾಣದ ಮಹಾಮನೆಗೆ ನಿತ್ಯ ಇಷ್ಟಲಿಂಗ ಪೂಜೆಗೆ ಪತ್ರ ಹಾಗೂ ಪುಷ್ಪಗಳನ್ನು ತರುತ್ತಿದ್ದರು. ನಿತ್ಯ ಕಾಯಕ ಮಾಡುವಾಗ ಸಮಾನತೆಯ ವಚನಗಳನ್ನು ಓದುವುದು, ಕಾಯಕ, ದಾಸೋಹ, ಲಿಂಗಾಂಗಯೋಗ, ಪ್ರಸಾದ ಮತ್ತು ಧರ್ಮಗಳ ಬಗ್ಗೆ ಚಿಂತನೆ ನಡೆಸುತ್ತಿದ್ದರು” ಎಂದರು.
“ಪ್ರತಿ ವರ್ಷ ಅನಂತನ ಹುಣ್ಣಿಮೆಯಂದು ಹೂಗಾರ ಮಾದಯ್ಯ ಜಯಂತಿ ಆಚರಿಸಲಾಗುತ್ತಿದೆ. ಬಸವಾದಿ ಶರಣರಲ್ಲಿ ಹೂಗಾರ ಮಾದಯ್ಯನವರೂ ಕೂಡ ಒಬ್ಬ ಶರಣರು. 12ನೇ ಶತಮಾನದಿಂದಲೇ ಹೂಗಾರ ವೃತ್ತಿ ಶರಣಕುಲಕ್ಕೆ ಮತ್ತು ಸಮಾಜಕ್ಕೆ ಪುಷ್ಪ ಮತ್ತು ಬಿಲ್ವಪತ್ರೆಯನ್ನು ಪೂಜೆಗೆ ಒದಗಿಸುತ್ತ ಬಂದಿದೆ” ಎಂದರು. ನಂತರ ಹೂಗಾರ ಮಾದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಸಮಾಜದ ಹಿರಿಯರಾದ ಶಂಭುಲಿಂಗ ಹೂಗಾರ, ಮಂಜುನಾಥ ಪೂಜಾರ, ಸಿದ್ದಪ್ಪ ಮುಕ್ಕಲ್ಲ, ಗುರುಶಾಂತವ್ವ ಪೂಜಾರ, ಕಮಲವ್ವ ಪೂಜಾರ, ಈಶ್ವರಿ ಮುಕ್ಕಲ್ಲ, ಸೋಮಶೇಖರ ಪೂಜಾರ, ಲಕ್ಷ್ಮೀ ಮುಕ್ಕಲ್ಲ, ಮಹದೇವಪ್ಪ ಹೂಗಾರ, ವೈಜನಾಥ ಹೂಗಾರ ಸೇರಿದಂತೆ ಶ್ರೀಹೂಗಾರ ಮಾದಯ್ಯನವರ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಹೂಗಾರ ಸಮಾಜ ಬಾಂಧವರು ಇದ್ದರು.
ಚಿತ್ರ ಇದೆ : 18-ಕೆ.ಎಲ್.ಜಿ-3 : ಕಲಘಟಗಿಯಲ್ಲಿ ಶರಣ ಹೂಗಾರ ಮಾದಯ್ಯ ಜಯಂತಿ ಆಚರಣೆ
ವರದಿ ಶಶಿಕುಮಾರ ಕಟ್ಟಿಮನಿ