ಕಲಬುರಗಿ: ರಾಜ್ಯದಲ್ಲಿ ಮುಸ್ಲಿಂ ಸರ್ಕಾರವಿದೆ. ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕಾರ. ಇದನ್ನು ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಚಿವರೇ ಹೇಳಿಕೊಂಡು ಓಡಾಡಿದ್ದಾರಲ್ಲಾ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಸಂಘ ಪರಿವಾರದಲ್ಲಿ ತರಬೇತಿ ಪಡೆದುಕೊಳ್ಳಲಿ.
ಆಗ ಆರ್‌ಎಸ್‌ಎಸ್ ಏನು ಹೇಳುತ್ತದೆ ಗೊತ್ತಾಗುತ್ತದೆ. ಆಗಲಾದರೂ ಒಳ್ಳೆಯ ಸಂಸ್ಕೃತಿ ಬರುತ್ತದೆ. ನಾಲ್ಕು ದಿನ ಶಾಖೆಗೂ ಬರಲಿ. ಅಲ್ಲೂ ಒಳ್ಳೆಯ ಭಾಷೆ, ತಿಳಿವು ಬರುತ್ತದೆ. ಅದು ಬಿಟ್ಟು ದೂರ ನಿಂತುಕೊಂಡು ಏನೇನೋ ಮಾತನಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಟಾಂಗ್ ನೀಡಿದರು.
ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್, ಸರದಾರ ವಲ್ಲಭಭಾಯಿ ಪಟೇಲ್, ಮಹಾತ್ಮ ಗಾಂಧೀಜಿ ಅವರು ಸಂಘ ಪರಿವಾರವನ್ನು ಶ್ಲಾಘಿಸಿದ್ದಾರೆ. ಆದರೆ ಇಂದಿನ ಕಾಂಗ್ರೆಸ್‌ನವರಿಗೆ ಸಂಘ ಪರಿವಾರ ಎಂದರೆ ಆಗಿ ಬರುತ್ತಿಲ್ಲ ಎಂದರು.
ನೀವು ಮುಸ್ಲಿಮರ ಸೆರಗಿನಲ್ಲಿ ಕುಳಿತುಕೊಂಡು ಮಾತನಾಡಿದರೆ ಹೇಗೆ? ಅವರ ಬೆಂಬಲದಿಂದ ಅಲ್ಲವೇ ರಾಜ್ಯದಲ್ಲಿ ಹಲವು ಘಟನೆಗಳು ನಡೆಯುತ್ತಿರುವುದು? ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇರುವುದಕ್ಕೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ನೆಲಮಂಗಲ ಗಣೇಶನಿಗೆ ಕಲ್ಲು, ಕೊನೆಗೆ ಸರ್ಕಾರ ಗಣೇಶನನ್ನು ವ್ಯಾನ್‌ನಲ್ಲಿ ಕೊಂಡೊಯ್ಯಲಿಲ್ಲವೇ ಎಂದು ವಾಗ್ದಾಳಿ ನಡೆಸಿದರು.