ಹುಬ್ಬಳ್ಳಿ : ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿ ದತ್ತಾತ್ರೇಯ ವಿಗ್ರಹ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಶೀಘ್ರ ಬಂಧಿಸುವಂತೆ ನಗರ ಪೊಲೀಸ್ ಕಮಿಷನರ್‌ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೂಚಿಸಿದ್ದಾರೆ.
ದೇಶಪಾಂಡೆ ನಗರದ ದತ್ತಾತ್ರೇಯ ದೇವಸ್ಥಾನದಲ್ಲಿನ ಈ ಘಟನೆ ಅಕ್ಷಮ್ಯ ಅಪರಾಧ ಎಂದು ಖಂಡಿಸಿರುವ ಸಚಿವರು, ಇತ್ತೀಚೆಗೆ ಹಲವೆಡೆ ಹಿಂದೂಗಳ ನಂಬಿಕೆಗೆ ಧಕ್ಕೆ ತರುವಂಥ ದುಷ್ಕೃತ್ಯಗಳು ಘಟಿಸುತ್ತಲೇ ಇದ್ದು, ಸರ್ಕಾರದ ಬಿಗಿ ಆಡಳಿತ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ ಆಕ್ರೋಶ ಹೊರ ಹಾಕಿದ್ದಾರೆ.
ದತ್ತಾತ್ರೇಯ ಮೂರ್ತಿಯ ಕೈಗಳನ್ನು ಕತ್ತರಿಸಿ ದುಷ್ಕೃತ್ಯ ಎಸಗಿರುವ ಸಮಾಜಘಾತಕರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕ್ಕೆ ಗುರಿಪಡಿಸಬೇಕು ಎಂದು ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.
ನಾಡಿನೆಲ್ಲೆಡೆ ದಸರಾ ಮಹೋತ್ಸವ ಆಚರಿಸುತ್ತಿದ್ದು, ಜನತೆ ವಿಶೇಷ ಪೂಜೆ-ಪುನಸ್ಕಾರ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ. ಆದರೆ, ಕಿಡಿಗೇಡಿಗಳು ದುಷ್ಕೃತ್ಯ ನಡೆಸಿ ಹಬ್ಬಗಳಲ್ಲಿ ಧಾರ್ಮಿಕ ಆಚರಣೆಗೆ ಭಂಗ ತಂದು ಸಮಾಜದಲ್ಲಿ ಶಾಂತಿ ಕದಡುತ್ತಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.