ಹೊಸಪೇಟೆ(ವಿಜಯನಗರ): ಕತ್ತೆ ಮಾರಾಟ ಮಾಡಿ ಹಾಲು ಖರೀದಿಸದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಜೆನ್ನಿ ಮಿಲ್ಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರೈತರಿಗೆ ಕತ್ತೆ ನೀಡಿ ಅವರಿಂದ ಹಾಲು ಖರೀದಿಸುವ ವ್ಯವಹಾರ ನಡೆಸುತ್ತಿದ್ದ ಜೆನ್ನಿ ಮಿಲ್ಕ್ ಕಂಪನಿಯಿಂದ 318ಕ್ಕೂ ಹೆಚ್ಚು ರೈತರು ಮೋಸ ಹೋಗಿದ್ದರು.
ಸುಮಾರು 10 ಕೋಟಿ ರೂ.ಗೂ ಅಧಿಕ ವಂಚನೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಎಂಡಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ವೇದಯಪಾಳ್ಯಂ ಗ್ರಾಮದ ನೂತಲಪಾಟಿ ಮುರಳಿ(43), ಕಂಪನಿಯ ವ್ಯವಸ್ಥಾಪಕ ಕಡಪ ಜಿಲ್ಲೆಯ ಗಾಳಿವೀಡು ಗ್ರಾಮದ ಕಾವಲಪಲ್ಲಿ ಉಮಾಶಂಕರ ರೆಡ್ಡಿ(33), ಮತ್ತು ಕಂಪನಿಯ ಸೂಪರ್ ವೈಸರ್ ಕಡಪ ಜಿಲ್ಲೆ ಪೋರ್ಮಾಮಿಲ್ಲ ಮಂಡಲಂನ ಸೈಯದ್ ಮಹಮ್ಮದ್ ಗೌಸ್(27) ಅವರನ್ನು ಬಂಧಿಸಲಾಗಿದೆ.
ಎಸ್ಪಿ ಬಿ.ಎಲ್. ಶ್ರೀಹರಿಬಾಬು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ ರಚಿಸಲಾಗಿದ್ದು, ಆಂಧ್ರದಲ್ಲಿ ಆರೋಪಿಗಳ ಜಾಡು ದೊರೆತ ಕೂಡಲೇ ಕಾರ್ಯ ಪ್ರವೃತ್ತರಾಗಿ ಸೋಮವಾರ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 19ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದುವರೆಗೆ 318 ಜನ ವಂಚನೆಗೊಳಗಾದ ರೈತರು ದೂರು ನೀಡಿದ್ದಾರೆ. ಕಂಪನಿಗೆ ಸೇರಿದ 5 ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.