ಬೆಳಗಾವಿ : ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಂಗ್ರಾಳಿ ಗ್ರಾಮದ ಆರತಿ ಚವ್ಹಾಣ್(32) ಮೃತಪಟ್ಟ ಗರ್ಭಿಣಿ.
ಮಂಗಳವಾರ ಬೆಳಗ್ಗೆ ಹೊಟ್ಟೆ ನೋವು ಎಂದು ಇಲ್ಲಿನ ಗೊಂದಳಿ ಗಲ್ಲಿಯ ಆದರ್ಶ ಆಸ್ಪತ್ರೆಗೆ ಆರತಿ ಇಪ್ಪತ್ತೈದು ಸಾವಿರ ಹಣ ಕಟ್ಟಿಸಿಕೊಂಡಿದ್ದ ವೈದ್ಯರು ಬೆಳಗ್ಗೆ 11ಗಂಟೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದರು. ಹೊಟ್ಟೆಯೊಳಗೆ ನಾಲ್ಕು ತಿಂಗಳ ಶಿಶು ಇದೆ ಎಂದು ಮಾಹಿತಿ ನೀಡಿದ್ದ ವೈದ್ಯರು ಸ್ವಲ್ಪ ಹೊತ್ತಿನ ಬಳಿಕ ಆರು ತಿಂಗಳ ಕೂಸಿದೆ ಎಂದು ಹೇಳಿದ್ದರು.
ಆಪರೇಷನ್ ಬಳಿಕ ಆರತಿಯವರಿಗೆ ಹೊಟ್ಟೆನೋವು ತೀವ್ರಗೊಂಡಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇರದ ಕಾರಣ ನರ್ಸ್ ಗಳಿಂದ ಚಿಕಿತ್ಸೆ ನೀಡಲಾಗಿತ್ತು.
ಸಂಜೆ ಐದು ಗಂಟೆಗೆ ವೈದ್ಯರು ಬಂದು ನೋಡಿದಾಗ ಬಿಪಿ ಕುಸಿತ ಕಂಡಿದ್ದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಕೆಎಲ್‌ಇ ಆಸ್ಪತ್ರೆಗೆ ರವಾನೆ ಮಾಡಿದ್ದರು. ಕೆಎಲ್‌ಇ ಆಸ್ಪತ್ರೆಗೆ ಶಿಪ್ಟ್ ಮಾಡುವಾಗ ಮಾರ್ಗ ಮಧ್ಯದಲ್ಲಿ ಆರತಿ ಮೃತಪಟ್ಟಿದ್ದಾಳೆ.
ಆಸ್ಪತ್ರೆಯಲ್ಲಿ ಮೂರು ಗಂಟೆಗಳ ಕಾಲ ರೋಗಿ ನರಳಿದ್ರೂ ಚಿಕಿತ್ಸೆ ಕೊಡದೇ ನಿರ್ಲಕ್ಷ್ಯ ಮಾಡಿದ್ದಾರೆಂದು ಆರೋಪಿಸಿದ ಆರತಿ ಕುಟುಂಬಸ್ಥ ಆಸ್ಪತ್ರೆ ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಕುಟುಂಬಸ್ಥರು ತಮಗೆ ನ್ಯಾಯ ಕೊಡಿಸಬೇಕೆಂದು ಆರತಿ ಫೋಟೋ ಹಿಡಿದು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಕುಟುಂಬಸ್ಥರ ಆಕ್ರೋಶ ಮುಗಿಲುಮುಟ್ಟಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.