ಬೆಳಗಾವಿ : ಲಾರಿ ಚಾಲಕನೊಬ್ಬ ಬೈಕ್ ಗುದ್ದಿದ್ದಲ್ಲದೇ , ತನ್ನನ್ನು ಬೆನ್ನಟ್ಟಿ ಬಂದ ಗ್ರಾಮಸ್ಥರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಮತ್ತೂ ಐದು ವಾಹನಗಳಿಗೆ ಗುದ್ದಿ ಅಪಘಾತ ಎಸೆಗಿರುವ ಘಟನೆ ಅಥಣಿಯ ಹಳ್ಯಾಳ ಗ್ರಾಮದಲ್ಲಿ ನಡೆದಿದೆ.
ಆದರೆ ಛಲಬಿಡದ ಗ್ರಾಮಸ್ಥರು ಸಿನಿಮೀಯ ರೀತಿಯಲ್ಲಿ 70 ಕಿಮೀ ದೂರ ಬೆನ್ನಟ್ಟಿ ಲಾರಿ ಚಾಲಕನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.
ಹಳ್ಯಾಳ ಗ್ರಾಮದಲ್ಲಿ ಬೈಕ್ ಸವಾರನೊಬ್ಬನಿಗೆ ಗುದ್ದಿ ಗಾಯಗೊಳಿಸಿದ್ದ ಲಾರಿಚಾಲಕ ವಾಹನ ನಿಲ್ಲಿಸಿದೇ ಪರಾರಿಯಾಗಲು ಯತ್ನಿಸಿದ್ದ. ಆದರೆ ಗ್ರಾಮಸ್ಥರು ಬೈಕ್ ನಲ್ಲಿ ಈತನನ್ನು ಚೇಸ್ ಮಾಡಲು ಮುಂದಾಗಿದ್ದರು.
ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಹುಚ್ಚಾಪಟ್ಟೆ ಲಾರಿ ಚಲಾಯಿಸಿದ್ದ ಚಾಲಕ ತನ್ನ ಎದುರು ಬರುತ್ತಿದ್ದ ವಾಹನಗಳನ್ನೂ ಲೆಕ್ಕಿಸಿದೆ ವಿಕೃತಿ ಮೆರೆದಿದ್ದ. ಈತನಿಂದಾಗಿ ಐದು ಬೈಕ್ ಗಳು ಜಖಂಗೊಂಡಿದ್ದಲ್ಲದೇ ಹಲವರು ಗಾಯಗೊಂಡಿದ್ದರು.
ಘಟನಟ್ಟಿ, ನಂದಗಾಂವ, ಸವದಿ, ಸತ್ತಿ, ರಡ್ಡೆರೆಟ್ಟಿ ಗ್ರಾಮದ ಮೂಲಕ ಈತನನ್ನು ಬೆನ್ನತ್ತಿದ ಜನತೆ ಕೊನೆಗೂ ಹಿಡಿದ ಮನಬಂದಂತೆ ಥಳಿಸಿದರು. ಅಥಣಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.