ಬೆಳಗಾವಿ: ಬೆಳಗಾವಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಿಂದ ಸವದತ್ತಿಯ ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಸಮಾರಂಭ ಅಕ್ಟೋಬರ್ 13 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಕೆ. ಪಾಟೀಲ, ರಾಮಲಿಂಗಾರೆಡ್ಡಿ, ಲಕ್ಷ್ಮಿ ಹೆಬ್ಬಾಳ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ವಿಶ್ವಾಸ್ ವೈದ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶೇಷ ಆಮಂತ್ರಿಕರಾಗಿ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ, ವಾಯುವ್ಯ ಸಾರಿಗೆ ನಿಗಮ ಅಧ್ಯಕ್ಷ ಭರಮಗೌಡ ಕಾಗೆ, ದೆಹಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸವದತ್ತಿಯ ಶ್ರೀ ಯಲ್ಲಮ್ಮನ ದೇವಸ್ಥಾನ ವ್ಯಾಪ್ತಿಯ ಪ್ರದೇಶದಲ್ಲಿ ಪ್ರವಾಸಿಗರಿಗೆ ಅಗತ್ಯವಾಗಿರುವ ಮೂಲಸೌಕರ್ಯಗಳಾದ ಕೊಠಡಿ ಒಳಗೊಂಡ ತಂಗುದಾಣಗಳು, ಡಾರ್ಮಿಟರಿ, ಪಾರ್ಕಿಂಗ್ ಸೌಲಭ್ಯ, ಸಾಮೂಹಿಕ ಶೌಚಾಲಯಗಳು, ಸ್ನಾನಗೃಹಗಳು, ಲಗೇಜ್ ಕೊಠಡಿ, ಉದ್ಯಾನವನ ಇತರೆ ಸೌಲಭ್ಯಗಳನ್ನು 22.45 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇಂದು ಲೋಕಾರ್ಪಣೆ ಮಾಡಲಾಗುವುದು.