ಮುಂಬೈ : ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸಲ್ಮಾನ್ ಖಾನ್ ಸೇರಿದಂತೆ ಹಲವು ಸೆಲೆಬ್ರಿಟಿಗಳ ಆಪ್ತ ಹಾಗೂ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ನಾಯಕ ಬಾಬಾ ಸಿದ್ದೀಕಿ ಕಳೆದ ರಾತ್ರಿ ಮುಂಬೈನಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.
ಬಾಬಾ ಸಿದ್ದೀಕಿ ಶನಿವಾರದಂದು ಪೂರ್ವ ಬಾಂದ್ರಾದಲ್ಲಿರುವ ತಮ್ಮ ಪುತ್ರ ಜೀಶಾನ್ ಸಿದ್ದೀಕಿ ಅವರ ಕಛೇರಿ ಬಳಿ ನಿಂತಿರುವಾಗ ಮೂವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿನ ಮಳೆಗರೆದಿದ್ದಾರೆ.
ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಒಮ್ಮೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇತ್ತೀಚೆಗಷ್ಟೇ ಅವರು ಅಜಿತ್ ಪವಾರ್ ನೇತೃತ್ವದ NCP ಸೇರ್ಪಡೆಗೊಂಡಿದ್ದರು.
ಬಾಲಿವುಡ್ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರುಗಳಿಗಾಗಿ ಬಾಬಾ ಸಿದ್ದೀಕಿ ಏರ್ಪಡಿಸುತ್ತಿದ್ದ ಇಫ್ತಾರ್ ಕೂಟಕ್ಕೆ ಗಣ್ಯಾತಿಗಣ್ಯರು ಆಗಮಿಸುತ್ತಿದ್ದರು.
ಯಾವ ಕಾರಣಕ್ಕೆ ಬಾಬಾ ಸಿದ್ದೀಕಿ ಅವರನ್ನು ಹತ್ಯೆ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ. ಹತ್ಯೆ ಕುರಿತಂತೆ ತೀವ್ರ ತನಿಖೆ ನಡೆಸುತ್ತಿರುವ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.