ಬೆಳಗಾವಿ: ಪ್ರಯಾಣಿಕರ ದಟ್ಟಣೆ ನಡುವೆಯೂ ಬೆಳಗಾವಿ -ಬೆಂಗಳೂರು ಮಾರ್ಗವಾಗಿ ಪ್ರತಿದಿನ ಬೆಳಗ್ಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನ ಸಂಚಾರವನ್ನು ಅಕ್ಟೋಬರ್ 27ರಿಂದ ಸ್ಥಗಿತಗೊಳಿಸಲಾಗುವುದು.
ಬೆಳಗ್ಗೆ ಬೆಂಗಳೂರಿಗೆ ತೆರಳಿ ಒಂದೇ ದಿನದಲ್ಲಿ ತುರ್ತು ಕೆಲಸ ಮುಗಿಸಿಕೊಂಡು ವಾಪಸ್ ಬರಲು ಈ ವಿಮಾನ ಆಸರೆಯಾಗಿತ್ತು.
ಈ ವಿಮಾನ ಸೇವೆ ಸ್ಥಗಿತಗೊಂಡರೆ ಈ ಭಾಗದ ವಾಣಿಜ್ಯೋದ್ಯಮ ಚಟುವಟಿಕೆಗೆ ಹಿನ್ನಡೆಯಾಗುತ್ತದೆ. ಯಾವುದೇ ಕಾರಣಕ್ಕೂ ಬೆಳಗಿನ ವಿಮಾನ ಸಂಚಾರ ಸ್ಥಗಿತಗೊಳಿಸದೆ ಮುಂದುವರಿಸಬೇಕೆಂಬುದು ಈ ಭಾಗದ ಜನರ ಒತ್ತಾಯವಾಗಿದೆ.
ಬೆಳಗಾವಿ ವಿಮಾನ ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ ಬೆಂಗಳೂರಿಗೆ ಹೋಗಿ ಅಲ್ಲಿಂದ ಅಂತರ ರಾಷ್ಟ್ರೀಯ ವಿಮಾನ ಸಂಪರ್ಕ ಸಾಧಿಸಲು ಈ ವಿಮಾನದಿಂದ ಅನುಕೂಲವಾಗಿತ್ತು. ಎರಡು ವರ್ಷಗಳಿಂದ ಪ್ರತಿದಿನ ಶೇಕಡ 85ರಷ್ಟು ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
ಇದೀಗ ಇಂಡಿಗೋ ವಿಮಾನ ಸಂಚಾರವನ್ನು ಸ್ಥಗಿತಗೊಳಿಸುತ್ತಿದ್ದು, ಈ ವಿಮಾನ ಸೇವೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.