ಬೆಂಗಳೂರು : ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ವಿರುದ್ಧದ ಅಭಿಯೋಜನಾ ಹಿಂಪಡೆಯಲು ರಾಜ್ಯ ಸರ್ಕಾರದ ನಿರ್ಧರಿಸಿರುವುದನ್ನು ಖಂಡಿಸಿ ಬಿಜೆಪಿ ಇಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ, ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷರಾದ ಎಸ್. ಹರೀಶ್, ಸಪ್ತಗಿರಿ ಗೌಡ, ಸಿ.ಕೆ. ರಾಮಮೂರ್ತಿ ಮೊದಲಾದವರು ಭಾಗವಹಿಸಲಿದ್ದಾರೆ.
ಇನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದ್ದು, ಇದರ ಜತೆಗೆ ಪ್ರಕರಣವನ್ನು ಅಭಿಯೋಜನೆಯಿಂದ ಕೈ ಬಿಟ್ಟಿರುವುದನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರುವುದಕ್ಕೂ ಬಿಜೆಪಿ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಇನ್ನು ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದು, ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿರುವ ಪ್ರಕರಣ ಇನ್ನು ಕೂಡ ತನಿಖೆ ನಡೆಯುತ್ತಿದೆ. ಹೀಗಿರುವ ರಾಜ್ಯ ಸರ್ಕಾರ ಪ್ರಕರಣವನ್ನು ಹಿಂಪಡೆಯಬಾರದು ಎಂದು ಹೇಳಿದರು.
ಅಲ್ಲದೇ ಪ್ರಕರಣವನ್ನು ಹಿಂಪಡೆಯದಂತೆ ಬಿಜೆಪಿ ಶಾಸಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಮುಂದಾದರೆ ಅತ್ತ ಅವಕಾಶ ನೀಡದೆ ಮುಖ್ಯಮಂತ್ರಿ ದುರಹಂಕಾರ ವರ್ತನೆ ತೋರುತ್ತಿದ್ದಾರೆ ಎಂದು ಜೋಶಿ ಆಕ್ರೋಶ ಹೊರಹಾಕಿದರು.