ತುರುವೇಕೆರೆ:- ಪ್ರತಿಭಾ ಪುರಸ್ಕಾರಕ್ಕೆ ಜಾತಿಯ ಲೇಪನ ಬೇಡ, ಎಲ್ಲಾ ಸಮುದಾಯದಲ್ಲೂ ಪ್ರತಿಭಾವಂತರಿದ್ದಾರೆ, ಎಲ್ಲರನ್ನೂ ಗುರುತಿಸಿ ಪುರಸ್ಕರಿಸಿದಾಗ ಮಾತ್ರ ವಿಶ್ವಗುರು ಬಸವಣ್ಣನವರ ಆಶಯ ಸಾರ್ಥಕ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತುರುವೇಕೆರೆ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ, ಅಭಿನಂದನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣ, ಬುದ್ದ, ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವದ ಬಹುದೊಡ್ಡ ಸಂಪತ್ತುಗಳು. ಅವರ ಆದರ್ಶ, ಆಶಯಗಳು ಸಾರ್ವಕಾಲಿಕವಾದುದು. ಜಗತ್ತಿಗೆ ಜಾತಿ, ಧರ್ಮ ಮೀರಿದ ಮಾನವೀಯ ಸಂದೇಶ ನೀಡಿದ ಮಹನೀಯರನ್ನು ಜಾತಿ ಸಂಕೋಲೆಯಲ್ಲಿ ಬಂಧಿಸುವುದು ಸರಿಯಲ್ಲ ಎಂದರು.
ಬಸವಣ್ಣನವರು ಕೇವಲ ವೀರಶೈವ ಲಿಂಗಾಯಿತ ಸಮಾಜಕ್ಕೆ ಮಾತ್ರ ಸೀಮಿತರಾಗಿಲ್ಲ. 12 ನೇ ಶತಮಾನದಲ್ಲಿಯೇ ಜಾತಿಯತೆಯನ್ನು ತೊಡೆದು ಹಾಕಿ ಸಮಾನತೆ ಸಾರಿದ ಮಹಾನ್ ಪುರುಷರು ಅವರ ವಿಚಾರಧಾರೆಗಳು, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ನಾವೆಲ್ಲರೂ ನಡೆಯಬೇಕಿದೆ. ಪ್ರತಿಭಾ ಪುರಸ್ಕಾರ ಕೇವಲ ಲಿಂಗಾಯಿತ ಸಮಾಜಕ್ಕೆ ಮೀಸಲು ಮಾಡದೆ ಮುಂದಿನ ದಿನಗಳಲ್ಲಿ ಎಲ್ಲ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಮಾಡಿ ನಾನು ಸಹ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದ ಅವರು, ಬೇರೆಯವರನ್ನು ಬಹಳ ಗೌರವ, ಪ್ರೀತಿ ವಿಶ್ವಾಸದಿಂದ ಕಾಣುವ ವೀರಶೈವ ಲಿಂಗಾಯಿತ ಸಮಾಜ ಸಣ್ಣ ಪುಟ್ಟ ತಪ್ಪುಗಳಿಂದ ಎರಡು ಮೂರು ಗುಂಪುಗಳಾಗುತ್ತಿದೆ. ಇದನ್ನು ಬಿಟ್ಟು ಎಲ್ಲರೂ ಒಗ್ಗಾಟ್ಟಾಗಿ ಸಮಾಜ ಕಟ್ಟುವ ಕೆಲಸವನ್ನು ಮಾಡಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಗೋಡೆಕೆರೆ ಸಂಸ್ಥಾನ ಮಠದ ಚಿರಪಟ್ಟಾದ್ಯಕ್ಷರಾದ ಮೃತ್ಯಂಜಯದೇಶಿಕೇಂದ್ರ ಸ್ವಾಮೀಜಿ, ಕಾಡಸಿದ್ದೇಶ್ವರ ಮಠದ ಕರಿವೃಷಭದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಗಳು ಆಶೀರ್ವಾದ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್.ಎಂ. ಕುಮಾರಸ್ವಾಮಿ ಪ್ರಸ್ತಾವಿಕ ನುಡಿಗಳನ್ನಾಡಿದರು.
ಕೇಂದ್ರ ಸಚಿವ ವಿ.ಸೋಮಣ್ಣ ಕಾರ್ಯಕ್ರಮಕ್ಕೆ ಆಗಮಿಸಲು ಸುಮಾರು ಎರಡು ಗಂಟೆ ತಡವಾಗಿದ್ದರಿಂದ ವೇದಿಕೆಯಲ್ಲಿ ಹಲವರು ಬಸವಣ್ಣರ ವಚನಗಳನ್ನು ಹಾಡಿ ರಂಜಿಸಿದರೆ, ಶಾಸಕ ಎಂ.ಟಿ.ಕೃಷ್ಣಪ್ಪ ಮೈಕ್ ಹಿಡಿದು ಚನ್ನಪ್ಪ ಚನ್ನೇಗೌಡ ಎಂಬ ಜಾನಪದ ಹಾಡು ಹಾಡಿ ಜನರನ್ನು ರಂಜಿಸಿ ಚಪ್ಪಾಳೆ ಗಿಟ್ಟಿಸಿದರು. ಈ ಸಂಧರ್ಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜುರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಹೆಚ್.ಬಿ.ನಂಜೇಗೌಡ, ಎಂ.ಡಿ.ಲಕ್ಷ್ಮೀನಾರಾಯಣ್, ತಹಶೀಲ್ದಾರ್ ಎ.ಎನ್. ಕುಂ.ಇ ಅಹಮದ್, ಬಿಇಓ ಸೋಮಶೇಖರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಶಾ ರಾಜಶೇಖರ್, ಸದಸ್ಯ ಯಜಮಾನ್ ಮಹೇಶ್, ನೊಳಂಬ ಲಿಂಗಾಯಿತ ಸಂಘದ ನಿರ್ದೇಶಕ ಎಂ.ದೇವರಾಜು, ವೀರಶೈವ ಲಿಂಗಾಯಿತ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ, ಜಿಲ್ಲಾದ್ಯಕ್ಷ ಡಾ.ಪರಮೇಶ್ ಸೇರಿದಂತೆ ಸಮಾಜದ ಮುಖಂಡರು, ಬಾಂದವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್