ಬೆಳಗಾವಿ : ಬೆಳಗಾವಿ ಗಡಿ ಭಾಗದಲ್ಲಿ ಎಂಇಎಸ್ ಪುಂಡರ ಹಾವಳಿ ಹೆಚ್ಚಾಗುತ್ತದೆ. ಈ ಬಾರಿ ಕೂಡ ನವೆಂಬರ್ 1 ರಂದು ಕರಾಳ ದಿನಾಚರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಎಂಇಎಸ್ ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಮಾಡಿತ್ತು. ಆದರೆ ಕರಾಳ ದಿನಾಚರಣೆಗೆ ಅವಕಾಶ ಇಲ್ಲ ಎಂದು ಖಡಕ್ಕಾಗಿ ಡಿಸಿ ಮಹಮ್ಮದ್ ರೋಷನ್ ಎಚ್ಚರಿಕೆ ನೀಡಿದ್ದಾರೆ.
ಹೌದು ರಾಜ್ಯೋತ್ಸವ ದಿನವೇ ಕರಾಳ ದಿನಕ್ಕೆ ಅನುಮತಿ ಕೋರಿ ಎಂಇಎಸ್ ನಿಂದ ಡಿಸಿಗೆ ಮನವಿ ಮಾಡಲಾಗಿತ್ತು. ಆದರೆ ಡಿಸಿ ಮೊಹಮ್ಮದ್ ರೋಷನ್ ಅವರು ನವೆಂಬರ್ 1 ರಂದು ಎಂಇಎಸ್ ಕರಾಳ ದಿನಾಚರಣೆಗೆ ಅನುಮತಿ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ. ಬೆಳಗಾವಿ ಡಿಸಿ ಕಚೇರಿಯಲ್ಲಿ ಎಂಇಎಸ್ ಮುಖಂಡರಿಗೆ ಬುದ್ಧಿವಾದ ಹೇಳಿದ್ದಾರೆ.
ನಮಗೆ ಭಾಷಾ ಸಾಮರಸ್ಯ ಕಾಪಾಡುವುದು ಮುಖ್ಯವಾಗಿದೆ. ಈ ಒಂದು ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿದೆ ಏನೇ ಆದರೂ ಸುಪ್ರೀಂ ಕೋರ್ಟ್ ನನ್ನನ್ನು ಕರಸುತ್ತೆ. ನನಗೆ ಜಿಲ್ಲಾಧಿಕಾರಿಯಾಗಿ ಕೆಲವು ಜವಾಬ್ದಾರಿಗಳಿವೆ. ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ನೀವು ಬದ್ಧರಾಗಿ ಒಪ್ಪಿಕೊಳ್ಳಬೇಕು ಎಂದು ಎಂಇಎಸ್ ಪುಂಡರಿಗೆ ಖಡಕ್ಕಾಗಿ ವಾರ್ನಿಂಗ್ ಕೊಟ್ಟಿದ್ದಾರೆ.
ನವೆಂಬರ್ 1ರಂದು ಬಿಟ್ಟು ಪರ್ಯಾಯ ದಿನ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡಲು ಅವಕಾಶ ಕೊಡ್ತೇನಿ.ಆದ್ರೆ ಯಾವುದೇ ರೀತಿಯ ಕರ್ನಾಟಕದ ಐಕ್ಯತೆ ಧಕ್ಕೆ ತರುವ ಹೋರಾಟ, ಪ್ರತಿಭಟನೆಗೆ ಅವಕಾಶ ಕೊಡುವುದಿಲ್ಲ. ಗಣೇಶೋತ್ಸವ, ಈದ್ ಮಿಲಾದ್ ಸಾಮರಸ್ಯದಿಂದ ಆಚರಣೆ ಮಾಡಿದ್ದೇವೆ. ಹಾಗೇ ನೀವೂ ರಾಜ್ಯೋತ್ಸವ ದಿನ ಬಿಟ್ಟು ಬೇರೆ ದಿನ ಹೋರಾಟ ಮಾಡಿ ಎಂದು ಡಿಸಿ ಮೊಹಮ್ಮದ್ ರೋಷನ್ ಬುದ್ಧಿ ಹೇಳಿದ್ದಾರೆ.