ಸಿರುಗುಪ್ಪ : -ನಗರದ ಸಿ.ಡಿ.ಪಿ.ಓ ಕಛೇರಿಯ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವತಿಯಿಂದ ಮಂಗಳವಾರ ನಡೆದ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸಲ್ಲಿಕೆಯಾದವು.
ನಗರದಲ್ಲಿ ಅನುಮತಿಯಿಲ್ಲದೇ ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದರಿಂದ ಚರಂಡಿ ನೀರು ಹೋಗದಂತೆ ಸಮಸ್ಯೆಯಾಗಿರುವ ಬಗ್ಗೆ, ವಸತಿ ವಿನ್ಯಾಸ ನಿರ್ಮಿಸಿ ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿರುವವರ ವಿರುದ್ದ ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹಿಸಲಾಯಿತು.
ಗುಂಡಿಗನೂರು ಗ್ರಾಮದಲ್ಲಿ ಹಳ್ಳದ ಪಕ್ಷದ ಜಮೀನಿನ ಒತ್ತುವರಿಯಿಂದ ನಮ್ಮ ಜಮೀನಿಗೆ ಮಳೆ ಮತ್ತು ಕೆರೆ ನೀರು ನುಗ್ಗಿ ಬೆಳೆ ಹಾಳಾಗುತ್ತಿದ್ದು ಒತ್ತುವರಿ ಜಾಗವನ್ನು ತೆರವುಗೊಳಿಸಿ ನಾಗರುದ್ರಗೌಡ ಮನವಿ ಸಲ್ಲಿಸಿದರು.
ಮುಂದಿನ ತಿಂಗಳ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಸಭೆಯ ದಿನಾಂಕದ ಬಗ್ಗೆ ಗ್ರಾಮಪಂಚಾಯಿತಿ ಮತ್ತು ನಗರಸಭೆಯ ಸ್ವಚ್ಛತಾ ವಾಹನಗಳಲ್ಲಿ ಮುಂಚಿತವಾಗಿ ಮಾಹಿತಿ ಪ್ರಕಟಿಸುವಂತೆ ಮನವಿ ಸಲ್ಲಿಕೆಯಾಯಿತು.
ಹೆಚ್ಚಾಗಿ ನಗರಸಭೆಗೆ ಸಂಬಂದಿಸಿದಂತೆ ದೂರುಗಳು ಕೇಳಿಬಂದಿದ್ದು, ಇತ್ಯರ್ಥಗೊಳ್ಳದ ಹೆದ್ದಾರಿ ಸಮಸ್ಯೆ, ಶಿಕ್ಷಣ, ತಾಲೂಕು ಪಂಚಾಯಿತಿಗೆ ಸಂಬಂದಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಸಾರ್ವಜನಿಕರ ದೂರುಗಳಿಗೆ ಸಂಬಂದಪಟ್ಟ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಾತಿ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆಯ ನೀಡುತ್ತಿದ್ದ ಅಧಿಕಾರಿಗಳನ್ನು ಸಿ.ಪಿ.ಐ ಸಂಗಮೇಶ್ ಅವರು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ತಹಶೀಲ್ದಾರ್ ಹೆಚ್.ವಿಶ್ವನಾಥ, ಗ್ರೇಡ್-2 ತಹಶೀಲ್ದಾರ್ ಸತ್ಯಮ್ಮ, ನಗರಸಭೆ ಆಯುಕ್ತ ಹೆಚ್.ಎನ್.ಗುರುಪ್ರಸಾದ್ ಸೇರಿದಂತೆ ಇನ್ನಿತರ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ