ಬೆಳಗಾವಿ: ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ಪದ್ಮಣ್ಣನವರ್ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
ಸಂತೋಷ್ ಪುತ್ರಿ ಸಂಜನಾ ತನ್ನ ತಂದೆಯ ಕೊಲೆ ಸಂಬಂಧ ತನ್ನ ಸ್ವಂತ ತಾಯಿಯ ವಿರುದ್ಧ ದೂರು ದಾಖಲಿಸಿದ ನಂತರ ಪೊಲೀಸರು ಎಫ್ ಐ ಆರ್ ದಾಖಲಿಸಿ ಸಂತೋಷ್ ಅವರ ಪತ್ನಿ ಮತ್ತು ಕೊಲೆಗೆ ಕಾಂಟ್ರ್ಯಾಕ್ಟ್ ಪಡೆದಿದ್ದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಮೃತರ ಪತ್ನಿ ಉಮಾ ಸಂತೋಷ್ ಪದ್ಮಣ್ಣನವರ್ (41), ಕೊಡಗು ಮೂಲದ ಶೋಭಿತ್ ಗೌಡ (31) ಮತ್ತು ಪವನ್ (35) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಅವರನ್ನು ಬಂಧಿಸಿದ ಪೊಲೀಸರು, ವೈದ್ಯಕೀಯ ಪರೀಕ್ಷೆಯ ನಂತರ, ಸಾಕ್ಷ್ಯ ಪರಿಶೀಲನೆಗಾಗಿ ಘಟನಾ ಸ್ಥಳಕ್ಕೆ ಕೊಂಡೊಯ್ದು ನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮೂಲಗಳ ಪ್ರಕಾರ, ಪ್ರಮುಖ ಆರೋಪಿ, ಉಮಾ ಶೋಭಿತ್ ಗೌಡ ಟೆಲಿಗ್ರಾಮ್ ನಲ್ಲಿ ಅವರೊಂದಿಗೆ ಸ್ನೇಹ ಬೆಳೆಸಿದ್ದರು ಮತ್ತು ಪತಿಯ ಕಿರುಕುಳದ ಬಗ್ಗೆ ಹಂಚಿಕೊಂಡಿದ್ದಾರೆ.
ಶೋಭಿತ್ ಮತ್ತು ಪವನ್ ಇತ್ತೀಚೆಗೆ ಅವಳನ್ನು ಭೇಟಿಯಾಗಲು ಬೆಳಗಾವಿಗೆ ಬಂದಾಗ, ಅವಳು ತನ್ನ ಗಂಡನ ಕೊಲೆಗೆ ಯೋಜಿಸಿದ್ದಳು ಮತ್ತು ಸಂತೋಷ್ ನನ್ನು ಕೊಲ್ಲಲು ಸಹಾಯ ಮಾಡಿದರೆ ಹಣ ನೀಡುವುದಾಗಿ ಭರವಸೆ ನೀಡಿದ್ದಳು.
ಅಕ್ಟೋಬರ್ 9 ರಂದು ಶೋಭಿತ್‌ಗೆ ಕರೆ ಮಾಡಿ ಎಲ್ಲವನ್ನು ಸಿದ್ಧಪಡಿಸಿ ಸಂತೋಷ್‌ಗೆ ನಿದ್ರೆ ಮಾತ್ರೆ ತಿನ್ನಿಸಿರುವುದಾಗಿ ಹೇಳಿದ್ದಾಳೆ. ಶೋಭಿತ್ ಮತ್ತು ಪವನ್ ಅವರನ್ನು ಬರುವಂತೆ ಹೇಳಿ, ಅವರ ಸಹಾಯದಿಂದ ಸಂತೋಷ್ ನನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾಳೆ.
ಪೊಲೀಸರ ತನಿಖೆಯಲ್ಲಿ ಈ ಹತ್ಯೆಯ ಹಿಂದಿನ ಹಲವು ರಹಸ್ಯಗಳು ಬಯಲಾಗಿದೆ. ಆರ್ಥಿಕವಾಗಿ ಶ್ರೀಮಂತರಾಗಿದ್ದ ಸಂತೋಷ್ ಅವರು ಸುರಕ್ಷತೆ ದೃಷ್ಟಿಯಿಂದ ಮಹಾಂತೇಶನಗರದಲ್ಲಿರುವ ತಮ್ಮ ಮನೆಯ ಒಳಗೆ ಮತ್ತು ಹೊರಗೆ ಸುಮಾರು 17 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು.
ಸಿಸಿಟಿವಿ ದೃಶ್ಯಾವಳಿಗಳು ಮೃತನ ವಿಭಿನ್ನ ಸ್ವರೂಪವನ್ನು ಬಹಿರಂಗಪಡಿಸುತ್ತವೆ. ವಿಚಾರಣೆ ವೇಳೆ ಸಂತೋಷ್‌ಗೆ ಹಲವು ವಿವಾಹೇತರ ಸಂಬಂಧಗಳಿದ್ದು, ಬೇರೆ ಬೇರೆ ಮಹಿಳೆಯರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ ಎಂದು ಉಮಾ ಹೇಳಿದ್ದಾಳೆ.
ವರ್ಷಗಟ್ಟಲೆ ಉಮಾಳನ್ನು ಹಿಂಸಿಸಲು ಒಂದಲ್ಲ ಒಂದು ನೆಪವನ್ನು ಹುಡುಕುತ್ತಿದ್ದ. ಸಂತೋಷ್ ಕಿರುಕುಳದಿಂದ ಬೇಸತ್ತು ಉಮಾ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿ, ಹೃದಯಾಘಾತ ಎಂದು ಬಿಂಬಿಸಲು ಹೊರಟಿದ್ದಳು.
ಆದರೆ, ಬೆಂಗಳೂರಿನಲ್ಲಿ ವಾಸವಿದ್ದ ಮಗಳು ಸಂಜನಾ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡುವಂತೆ ಕೇಳಿದಾಗ ಸತ್ಯ ಬೆಳಕಿಗೆ ಬಂದಿದೆ, ನಂತರ ಅದನ್ನು ಅಳಿಸಲಾಗಿದೆ ಎಂದು ತಿಳಿದುಬಂದಿದೆ.
TNIE ಯೊಂದಿಗೆ ಮಾತನಾಡಿದ ಪೊಲೀಸ್ ಕಮಿಷನರ್ ಇಡಾ ಮಾರ್ಟಿನ್ ಮಾರ್ಬನ್ ಯ್ಯಾಂಗ್, “ಈ ಪ್ರಕರಣದಲ್ಲಿನಾವು ಈಗಾಗಲೇ ಮೂವರನ್ನು ಬಂಧಿಸಿದ್ದೇವೆ. ಸಂತೋಷ್ ಅವರ ಪತ್ನಿ, ಪ್ರಮುಖ ಆರೋಪಿಯಾಗಿದ್ದು ಗಂಡನ ಕಿರುಕುಳದಿಂದ ಹೊರಬರಲು ಪತಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ, ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿವೆ ಎಂದಿದ್ದಾರೆ.