Ad imageAd image

ಇನ್ನರ್ ವೀಲ್ ಕ್ಲಬ್ ಇಂದ ಮಧುಮೇಹ, ಥೈರಾಯಿಡ್ ತಪಾಸಣಾ ಶಿಬಿರ

Bharath Vaibhav
ಇನ್ನರ್ ವೀಲ್ ಕ್ಲಬ್ ಇಂದ ಮಧುಮೇಹ, ಥೈರಾಯಿಡ್ ತಪಾಸಣಾ ಶಿಬಿರ
WhatsApp Group Join Now
Telegram Group Join Now

ತುರುವೇಕೆರೆ:– ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪ, ಚೌದ್ರಿ ಆಸ್ಪತ್ರೆ, ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಚೌದ್ರಿ ಕನ್ವೆಂಷನ್ ಹಾಲ್ ನಲ್ಲಿ ಉಚಿತ ಮಧುಮೇಹ, ರಕ್ತದೊತ್ತಡ, ಥೈರಾಯಿಡ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರವನ್ನು ವೈದ್ಯೆ ಡಾ.ಆಶಾ ಚೌದ್ರಿ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ನಾವೆಲ್ಲರೂ ಒತ್ತಡದಲ್ಲಿ ಬದುಕುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ಒತ್ತಡದ ಬದುಕು ಆರೋಗ್ಯದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ. ಆರೋಗ್ಯ ಚೆನ್ನಾಗಿದ್ದರೆ ಮಾತ್ರ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯ, ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚು ಗಮನಹರಿಸಬೇಕೆಂದರು.

ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ನೇತ್ರಾಸಿದ್ದಲಿಂಗಸ್ವಾಮಿ ಮಾತನಾಡಿ, ಇಂದು ಸಮಾಜದಲ್ಲಿ ರಕ್ತದೊತ್ತಡ, ಮಧುಮೇಹ ಇಲ್ಲದವರೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಮಧುಮೇಹ ಹಾಗೂ ಬಿಪಿ ಏರುಪೇರಿನಿಂದ ಹೃದಯಾಘಾತದ ಸಮಸ್ಯೆಗಳು ಉದ್ಭವವಾಗಿ ಚಿಕ್ಕ ವಯಸ್ಸಿಗೆ ಸಾವನ್ನಪ್ಪುತ್ತಿರುವ ಸಂಖ್ಯೆ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಸಂಕಲ್ಪ ವತಿಯಿಂದ ಉಚಿತವಾಗಿ ರಕ್ತದೊತ್ತಡ, ಮಧುಮೇಹ ತಪಾಸಣಾ ಶಿಬಿರವನ್ನು ಪ್ರತಿ ತಿಂಗಳು ನಡೆಸಲಾಗುತ್ತಿದ್ದು, ನಾಗರೀಕರು ಇದರ ಸದುಪಯೋಗ ಪಡೆದುಕೊಂಡು ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ ಎಂದರು.

ಇನ್ನರ್ ವೀಲ್ ಕ್ಲಬ್ ಸಂಕಲ್ಪದ ಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಮಹಿಳೆಯರನ್ನೇ ಒಳಗೊಂಡಂತಹ ಇನ್ನರ್ ವೀಲ್ ಸಂಸ್ಥೆಯು ತಾಲ್ಲೂಕಿನಾದ್ಯಂತ ಹಲವಾರು ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿದೆ. ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ಶಿಬಿರ, ತಂಗುದಾಣ ನಿರ್ಮಾಣ, ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪಾಸಣಾ ಶಿಬಿರ, ಪರಿಸರ ಸಂರಕ್ಷಣೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಸೇರಿದಂತೆ ಹಲವು ಸೇವಾ ಚಟುವಟಿಕೆಗಳನ್ನು ನಡೆಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಾಗರೀಕರ, ಪ್ರಾಯೋಜಕರ ಸಹಕಾರದಲ್ಲಿ ಹೆಚ್ಚಿನ ಸೇವೆಯನ್ನು ತಾಲ್ಲೂಕಿನ ಜನತೆಗೆ ನೀಡಬೇಕೆಂಬ ಸಂಕಲ್ಪ ಇನ್ನರ್ ವೀಲ್ ನದ್ದಾಗಿದೆ ಎಂದರು.

ಶಿಬಿರದಲ್ಲಿ ನೂರಾರು ಮಂದಿ ನಾಗರೀಕರು ಮಧುಮೇಹ, ರಕ್ತದೊತ್ತಡ ಹಾಗೂ ಥೈರಾಯಿಡ್ ಪರೀಕ್ಷೆ ಮಾಡಿಸಿಕೊಂಡರು. ಇದೇ ಸಂದರ್ಭದಲ್ಲಿ ವೈದ್ಯೆ ಡಾ.ಆಶಾ ಚೌದ್ರಿಯವರ ಜನ್ಮದಿನವನ್ನು ಆಚರಿಸಿ ಸಿಹಿ ಹಂಚಲಾಯಿತು. ಇನ್ನರ್ ವೀಲ್ ಕ್ಲಬ್ ಸಂಕಲ್ಪದ ಕಾರ್ಯದರ್ಶಿ ಆನಂದಜಲ, ಮಾಜಿ ಅಧ್ಯಕ್ಷೆ ಲತಾಪ್ರಸನ್ನ, ಖಜಾಂಚಿ ಸವಿತಾಅನಿಲ್, ಆನಂದಮದನ, ವೈದ್ಯರಾದ ಡಾ.ಚೌದ್ರಿ ನಾಗೇಶ್, ಡಾ.ರಾಜೀವ್, ರೋಟರಿ ಅಧ್ಯಕ್ಷ ದೇವರಾಜ್, ಕಾರ್ಯದರ್ಶಿ ಶಿವರಾಜ್, ಪಟೇಲ್ ಚಂದ್ರು ಮುಂತಾದವರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!