Ad imageAd image

ಕಿತ್ತೂರು ಇತಿಹಾಸ ಅಧ್ಯಯನ ಕೇಂದ್ರ ವಿಜಯಪುರದಿಂದ ಬೆಳಗಾವಿಗೆ ಸ್ಥಳಾಂತರ : ಸತೀಶ್ ಜಾರಕಿಹೊಳಿ 

Bharath Vaibhav
ಕಿತ್ತೂರು ಇತಿಹಾಸ ಅಧ್ಯಯನ ಕೇಂದ್ರ ವಿಜಯಪುರದಿಂದ ಬೆಳಗಾವಿಗೆ ಸ್ಥಳಾಂತರ : ಸತೀಶ್ ಜಾರಕಿಹೊಳಿ 
WhatsApp Group Join Now
Telegram Group Join Now

ಬೆಳಗಾವಿ: ಕಿತ್ತೂರು ಉತ್ಸವ-2024 ಹಾಗೂ ಚನ್ನಮ್ಮನ ವಿಜಯೋತ್ಸವದ 200 ನೇ ವರ್ಷದ ಆಚರಣೆಯನ್ನು ಈ ಬಾರಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಕಿತ್ತೂರಿನ ಇತಿಹಾಸವನ್ನು ರಾಜ್ಯಕ್ಕೆ ಸೀಮಿತಗೊಳಿಸದೇ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಪಾದಿಸಿದರು.

ಚನ್ನಮ್ಮನ ಕಿತ್ತೂರಿನ‌ ಕೋಟೆ ಆವರಣದಲ್ಲಿ ಕಿತ್ತೂರು ಚನ್ನಮ್ಮ‌ ಮುಖ್ಯ ವೇದಿಕೆಯಲ್ಲಿ ಬುಧವಾರ ಜರುಗಿದ ಕಿತ್ತೂರು ಉತ್ಸವ-2024 ವಿಜಯೋತ್ಸವದ 200ನೇ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಿತ್ತೂರು ಉತ್ಸವದಲ್ಲಿ ಅನೇಕ‌ ಸಾಹಿತಿಗಳು, ಬುದ್ಧಿ ಜೀವಿಗಳು,‌ ಕಲಾವಿದರು ತಮ್ಮ ಪರಿಚಯವನ್ನು ನಾಡಿಗೆ ಮಾಡಿಕೊಳ್ಳುತ್ತಿದ್ದಾರೆ. ಕಿತ್ತೂರು ಇತಿಹಾಸಕ್ಕೆ ಸಂಬಂದಪಟ್ಟಂತೆ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ‌ ಸೇರಿದಂತೆ‌ ಇನ್ನೂ ಅನೇಕ ಹೋರಾಟಗಾರರ ಇತಿಹಾಸವನ್ನು ಮರುಸೃಷ್ಠಿ ಮಾಡುವುದು ಈ ಕಾರ್ಯಕ್ರಮದ ಉದ್ಧೇಶವಾಗಿದೆ.

ರಾಣಿ ಚನ್ನಮ್ಮನ ಆದರ್ಶಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಳೆದ ಸಾಲಿನಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ಕಿತ್ತೂರು‌ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ.‌ ಮುಂದೆಯೂ ಕೂಡ ಕಿತ್ತೂರು ಅಭಿವೃದ್ಧಿಗೆ ಅನುದಾನ ನೀಡಲಾಗುವುದು ಎಂದರು.

ಇತಿಹಾಸ ಅಧ್ಯಯನ ಕೇಂದ್ರ ಸ್ಥಳಾಂತರ:

ಕಿತ್ತೂರು ಇತಿಹಾಸ ಅಧ್ಯಯನ ಕೇಂದ್ರವನ್ನು ವಿಜಯಪುರದಿಂದ ಬೆಳಗಾವಿಗೆ ಸ್ಥಳಾಂತರಿಸಲಾಗುವುದು. ರಾಣಿ ಚನ್ನಮ್ಮ‌ವಿಶ್ವ ವಿದ್ಯಾಲಯವನ್ನು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲು‌ ಕ್ರಮ‌ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಮಹಿಳಾ‌ ಮತ್ತು ಮಕ್ಕಳ‌ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸ್ವಾತಂತ್ರ್ಯ ಶ್ರೀ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಕಿತ್ತೂರು‌ ನಾಡು ಸ್ವಾಭಿಮಾನದ ನಾಡಾಗಿದೆ. ಹೆಣ್ಣು ಮಕ್ಕಳು ಮನೆಯಿಂದ ಹೊರಬರದಂತಹ ಕಾಲದಲ್ಲಿ ರಾಣಿ‌ಚನ್ನಮ್ಮ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಧೀರ ಮಹಿಳೆಯಾಗಿದ್ದಳು. ರಾಜ್ಯದ ಶ್ರೀಮಂತ ಸಂಸ್ಕೃತಿಗೆ ರಾಣಿ ಚನ್ನಮ್ಮ, ಅಮಟೂರ ಬಾಳಪ್ಪನವರಂತಹ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಇಂದಿನ‌ ಮಕ್ಕಳಿಗೆ ಮನವರಿಕೆ ಮಾಡಬೇಕಾಗಿದೆ ಎಂದರು.

ರಾಜ್ಯ ಸರ್ಕಾರವು ಬಡವರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ವಿಶೇಷವಾಗಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ‌ ಮಾಡಲಾಗಿದೆ ಎಂದು ನುಡಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು‌ ಮಾತನಾಡಿ, ವಿಜಯೋತ್ಸವದ ಉತ್ಸಾಹ ಕೇವಲ ಕಿತ್ತೂರಿಗೆ ಸಿಮಿತವಾಗದೆ ಇಡೀ ವಿಶ್ವಕ್ಕೆ ಪ್ರೇರಣೆಯಾಗಿದೆ. ಕಿತ್ತೂರು ಉತ್ಸವ ಜನರ ಉತ್ಸವಾಗಿದೆ. ಇದು ಕೇವಲ ವಿಜಯೋತ್ಸವವಾಗದೇ ಪ್ರೇರಣಾ ಉತ್ಸವವಾಗಲಿ ಎಂದರು.

ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು, ಕಿತ್ತೂರು‌ ಕೊಟೆಯ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ‌ ಕಾರ್ಯವನ್ನು ಕೆಲವೇ ದಿನಗಳಲ್ಲಿ ಕೃತಿ ಮೂಲಕ‌ ಮಾಡಿ‌ ತೋರಿಸಲಾಗುವುದು ಎಂದರು. ಕಿತ್ತೂರು ಚನ್ನಮ್ಮನ ಸಂಶೋಧನೆ‌ ಕೇಂದ್ರವನ್ನು‌ ಕಿತ್ತೂರಿಗೆ ಒದಗಿಸಲು ಕೋರಿಕೆ ಇಟ್ಟರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ‌ ಚನ್ನಮ್ಮನ‌ ಕಿತ್ತೂರಿನ‌ ರಾಜಗುರು ಸಂಸ್ಥಾನ‌ ಮಠದ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿ, ನಿಚ್ಚಣಕಿಯ ಶ್ರೀ ಗುರು‌ ಮಡಿವಾಳೇಶ್ವರ ಮಠದ ಪಂಚಾಕ್ಷರಿ‌ ಮಹಾಸ್ವಾಮಿಗಳು, ಬೈಲೂರು‌ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಜಿಗಳು ಆಶಿರ್ವಚನ ನೀಡಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಿಟೀಷರ ವಿರುದ್ಧ ಹೋರಾಡಿ ರಾಣಿ‌ ಚನ್ನಮ್ಮನ ಸಾಹಸವನ್ನು ಸ್ಮರಿಸುವುದು ನಮ್ಮೆಲ್ಲರ‌ ಜವಾಬ್ದಾರಿಯಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ರಾಣಿ ಚನ್ನಮ್ಮ ಮುಂಚೂಣಿಯಲ್ಲಿದ್ದರು. ಕಿತ್ತೂರಿನ ಕೋಟೆಯಲ್ಲಿ ಸ್ವಾತಂತ್ರ್ಯ ಹೊರಾಟದ‌ ಕುರುಹುಗಳನ್ನು ನಾವು ಕಾಣಬಹುದಾಗಿದೆ ಎಂದು ನುಡಿದರು.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!