ಬೆಂಗಳೂರು: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರಿಂದ ಹಣ ಸುಲಿಗೆಗೆ ಪ್ರಯತ್ನಿಸಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆ ಮಂಜುಳಾ ಪಾಟೀಲ ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಮಂಜುಳಾ ಫೋನ್ಗಳಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಎಂಟು ಮಂದಿಯ ಖಾಸಗಿ ವಿಡಿಯೊ ಪತ್ತೆಯಾಗಿದ್ದು, ಅವುಗಳ ನೈಜತೆ ಪರಿಶೀಲನೆ ನಡೆಸಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಮಾಲೀಕಯ್ಯ ಗುತ್ತೇದಾರ್ ಅವರ ಪುತ್ರ ರಿತೇಶ್ ಗುತ್ತೇದಾರ್ ದೂರು ಆಧರಿಸಿ ಕಲಬುರಗಿಯ ಆಳಂದ ರಸ್ತೆಯ ವಿಜಯನಗರ ಕಾಲೊನಿ ನಿವಾಸಿಗಳಾದ ಮಂಜುಳಾ ಪಾಟೀಲ ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲ ಅವರನ್ನು ಪೊಲೀಸರು ಬಂಧಿಸಿದ್ದರು.
ಆಕೆಯಿಂದ ವಶಪಡಿಸಿಕೊಂಡ ಆರು ಮೊಬೈಲ್‌ಗಳ ಪರಿಶೀಲನೆ ವೇಳೆ ರಾಜಕೀಯ ಮುಖಂಡರು, ಅಧಿಕಾರಿಗಳ ವಿಡಿಯೊ ತುಣುಕುಗಳು ಸಿಕ್ಕಿದ್ದು, ಹಲವರಿಂದ ಹಣ ಸುಲಿಗೆಗೆ ಯತ್ನಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
‘ಸನ್ಮಾನದ ಹೆಸರಿನಲ್ಲಿ ಮಾಜಿ ಸಚಿವರಿಗೆ ಮಂಜುಳಾ ಪಾಟೀಲ ಕರೆ ಮಾಡಿ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಎಂದು ಪರಿಚಯಿಸಿಕೊಂಡಿದ್ದಳು. ನಂತರ ನಿತ್ಯ ಸಂದೇಶ ಕಳುಹಿಸಿ, ವಿಡಿಯೊ ಕರೆ ಮಾಡುತ್ತಿದ್ದಳು.
ಇಬ್ಬರೂ ದಿನ ಸಲುಗೆಯಿಂದ ಮಾತನಾಡುತ್ತಿದ್ದರು. ಈ ನಡುವೆ ಮೊಬೈಲ್ ಹಾಗೂ ವಿಡಿಯೊ ಕರೆಗಳನ್ನು ರೆಕಾರ್ಡ್ ಮಾಡಿಕೊಂಡು ಮಾಲೀಕಯ್ಯ ಗುತ್ತಿಗೆದಾರ್ ಅವರಿಂದ ₹ 20 ಲಕ್ಷ ಸುಲಿಗೆಗೆ ಯತ್ನಿಸಿದ್ದಾಳೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ತಾನು ಕಳುಹಿಸಿರುವ ಕೆಲವೊಂದು ಸಂದೇಶವನ್ನು ಅಳಿಸಿ ಹಾಕಿದ್ದಾಳೆ. ಅದನ್ನು ಮರುಜಪ್ತಿ ಮಾಡುವ ಸಲುವಾಗಿ ಮೊಬೈಲ್ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುವುದು. ಹಲವರ ಖಾಸಗಿ ವಿಡಿಯೊ ಪತ್ತೆಯಾಗಿದೆ.