ತುರುವೇಕೆರೆ: ರಾಜ್ಯ ಸರ್ಕಾರಿ ನೌಕರರ ಸಂಘದ ತುರುವೇಕೆರೆ ತಾಲೂಕು ಘಟಕದ ನಿರ್ದೇಶಕ ಸ್ಥಾನಕ್ಕೆ ಪದವಿ ಪೂರ್ವ ಹಾಗೂ ಪದವಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉಪನ್ಯಾಸಕ ಪಾಪಣ್ಣ ಕೇವಲ ಒಂದು ಮತದಿಂದ ಜಯಗಳಿಸಿ ಗೆಲುವಿನ ನಗೆ ಬೀರಿದ್ದಾರೆ.
ಪಟ್ಟಣದ ಸರ್ಕಾರಿ ಮಾದರಿ ಬಾಲಕರ ಪಾಠಶಾಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತುರುವೇಕೆರೆ ತಾಲೂಕು ಘಟಕಕ್ಕೆ ನೂತನ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಪದವಿ ಪೂರ್ವ ಹಾಗೂ ಪದವಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉಪನ್ಯಾಸಕ ಪಾಪಣ್ಣ ಕೇವಲ ಒಂದು ಮತದ ಅಂತರದಲ್ಲಿ ಜಯಗಳಿಸಿ ಇದೇ ಮೊದಲ ಬಾರಿಗೆ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ತೀವ್ರ ಪೈಪೋಟಿ ಕಂಡುಬಂದ ಈ ಕ್ಷೇತ್ರದಲ್ಲಿ ಪಾಪಣ್ಣ ತಮ್ಮ ಪ್ರತಿಸ್ಪರ್ಧಿ ನಿಜಗುಣಸ್ವಾಮಿ ಅವರಿಗಿಂತ ಒಂದು ಮತ ಅಧಿಕ ಪಡೆದು ಜಯಗಳಿಸಿದರು.
ಪದವಿ ಪೂರ್ವ ಹಾಗೂ ಪದವಿ ಕ್ಷೇತ್ರದಲ್ಲಿ 46 ಮಂದಿ ಮತದಾರರಿದ್ದರು. ಈ ಪೈಕಿ 41 ಮತಗಳು ಚಲಾವಣೆಯಾಗಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಪಾಪಣ್ಣ 19 ಮತಗಳನ್ನು ಪಡೆದು ವಿಜೇತರಾದರೆ, ಪ್ರತಿಸ್ಪರ್ಧಿ ಉಪನ್ಯಾಸಕ ನಿಜಗುಣಸ್ವಾಮಿ 18 ಹಾಗೂ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ನಂಜೇಗೌಡ ಕೇವಲ 04 ಮತ ಪಡೆದು ಪರಾಜಿತಗೊಂಡರು. ಚುನಾವಣೆಯಲ್ಲಿ ಜಯಗಳಿಸಿದ ಪಾಪಣ್ಣ ಅವರನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ, ಶಿಕ್ಷಕರಾದ ರಾಜು, ನಾಗರಾಜ್, ವಿವಿಧ ಸರ್ಕಾರಿ ಪ್ರೌಢಶಾಲೆಗಳ ಬೋದಕೇತರರಾದ ಕೆಂಪೇಗೌಡ, ಪೂರ್ಣಚಂದ್ರ, ಶಿವರಾಜ್ ಕುಮಾರ್, ಜಯಣ್ಣ ಸೇರಿದಂತೆ ಸ್ನೇಹಿತರು, ಹಿತೈಷಿಗಳು ಅಭಿನಂದಿಸಿದರು.
ವರದಿ: ಗಿರೀಶ್ ಕೆ ಭಟ್




