ತುರುವೇಕೆರೆ: ರಾಜ್ಯ ಸರ್ಕಾರಿ ನೌಕರರ ಸಂಘದ ತುರುವೇಕೆರೆ ತಾಲ್ಲೂಕು ಘಟಕದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ 32 ಮಂದಿ ನೂತನ ನಿರ್ದೇಶಕರನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಕಸಾಪ ಅಧ್ಯಕ್ಷ ಡಿ.ಪಿ.ರಾಜು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಅಭಿವೃದ್ದಿಗೆ ಶ್ರಮಿಸುತ್ತಿರುವಂತೆಯೇ ಸರ್ಕಾರಿ ನೌಕರರ ಸಂಘವು ನೌಕರರ ಸಮಸ್ಯೆಗಳಿಗೆ, ಶ್ರೇಯೋಭಿವೃದ್ದಿಗೆ ದುಡಿಯುತ್ತಿದೆ. ಸಾಹಿತ್ಯ ಪರಿಷತ್ತಿನಲ್ಲಿ ಬಹುತೇಕ ಸರ್ಕಾರಿ ನೌಕರರು ಕನ್ನಡಮ್ಮನ ಸೇವೆಯನ್ನು ಮಾಡುತ್ತಿದ್ದಾರೆ. ಸರ್ಕಾರ ಆಡಳಿತ ಭಾಷೆಯಾಗಿ ಕನ್ನಡ ಭಾಷೆಯನ್ನು ಘೋಷಿಸಿದ್ದು, ಅದನ್ನು ಅನುಷ್ಠಾನಗೊಳಿಸಿ ಕನ್ನಡ ಭಾಷೆಯ ಅಭಿವೃದ್ದಿಗೆ ತಮ್ಮದೇ ಕೊಡುಗೆಯನ್ನು ಸರ್ಕಾರಿ ನೌಕರರು ನೀಡುತ್ತಿದ್ದಾರೆ ಎಂದರು.
ತುರುವೇಕೆರೆ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ನೌಕರರ ಸಂಘ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡೂ ಸಂಘಟನೆಗಳು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಸಾಕಷ್ಟು ಕನ್ನಡ ಕಾರ್ಯಕ್ರಮಗಳನ್ನು ನಡೆಸಿವೆ ಎಂದ ಅವರು, ಸರ್ಕಾರಿ ನೌಕರರ ಸಂಘಕ್ಕೆ ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರುಗಳು ಸಂಘದ ಹಾಗೂ ನೌಕರರ ಶ್ರೇಯೋಭಿವೃದ್ದಿಗೆ ದುಡಿಯುವುದರ ಜೊತೆಗೆ ಕನ್ನಡ ಪರ ಚಟುವಟಿಕೆಯಲ್ಲೂ ನಿರಂತರವಾಗಿ ನಮ್ಮೊಂದಿಗೆ ತೊಡಗಿಸಿಕೊಳ್ಳಬೇಕೆಂದರು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ತುರುವೇಕೆರೆ ತಾಲ್ಲೂಕು ಘಟಕದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ 32 ಮಂದಿ ನೂತನ ನಿರ್ದೇಶಕರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಸಾಪ ಪದಾಧಿಕಾರಿಗಳಾದ ದಿನೇಶ್, ಬಸವರಾಜ್, ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಾರುತಿ, ಸಿಐಟಿಯು ಸತೀಶ್, ಸರ್ಕಾರಿ ನೌಕರರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್