ವಿಶ್ವದ ಅತ್ಯಂತ ಪ್ರಾಚೀನವಾದ ಮೊಸಳೆ ಸಾವನ್ನಪ್ಪಿದೆ. ಸುಮಾರು 110 ವರ್ಷ ವಯಸ್ಸಿನ ಕ್ಯಾಸಿಯಸ್ ಎಂಬ ಹೆಸರಿನ ಅತಿದೊಡ್ಡ ಬಂಧಿತ ಮೊಸಳೆ ನವೆಂಬರ್ 2ರಂದು ವಯೋಸಹಜವಾಗಿ ಸಾವನ್ನಪ್ಪಿದೆ ಎಂದು ಆಸ್ಟ್ರೇಲಿಯಾದ ಮರೀನ್‌ಲ್ಯಾಂಡ್ ಮೆಲನೇಶಿಯಾ ಮೊಸಳೆ ಆವಾಸಸ್ಥಾನ ತಿಳಿಸಿದೆ.
ಈ ಬಗ್ಗೆ ದುಗುಡ ವ್ಯಕ್ತ ಪಡಿಸಿರುವ ಮರೀನ್‌ಲ್ಯಾಂಡ್ ಮೆಲನೇಶಿಯಾ, ನಾವು ಕ್ಯಾಸಿಯಸ್ ಅನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ. ಆದರೆ ಕ್ಯಾಸಿಯಸ್ ಮೇಲಿನ ನಮ್ಮ ಪ್ರೀತಿ ಮತ್ತು ಅದರ ನೆನಪುಗಳು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ಹೇಳಿದ್ದಾರೆ.
ಈ ಕ್ಯಾಸಿಯಸ್ ಎಂಬ ಮೊಸಳೆ, ಪ್ರಪಂಚದಲ್ಲೇ ಸೆರೆ ಹಿಡಿಯಲಾದ ಅತಿ ದೊಡ್ಡ ಮೊಸಳೆಯಾಗಿದ್ದು, ಸುಮಾರು 1,000 ಕೆಜಿ ತೂಕವಿದ್ದು, ಬರೋಬ್ಬರಿ 18 ಅಡಿ ಉದ್ದವಿತ್ತು. ಈ ಕ್ಯಾಸಿಯಸ್ ಮೊಸಳೆ 1987 ರಿಂದ ಅಭಯಾರಣ್ಯದಲ್ಲಿ ವಾಸಿಸುತ್ತಿತ್ತು ಮತ್ತು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿತ್ತು.