ಬಾಗಲಕೋಟೆ : ಲಕ್ಕಿ ಡ್ರಾ ಹೆಸರಿನಲ್ಲಿ ಆನ್ ಲೈನ್ ವಂಚನೆಗೆ ಒಳಗಾದ ದಂಪತಿ ತಮ್ಮ ಜಮೀನು ಮಾರಿದ 52 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದಿದೆ.
ನಗರದ ಕುಶಲಕರ್ಮಿ ದಂಪತಿಗೆ ಮೀಶೋ ಆಪ್ ಹೆಸರಿನಲ್ಲಿ ವಂಚನೆ ಮಾಡಲಾಗಿದೆ.ಮೀಶೋ ಆನ್‌ಲೈನ್ ಶಾಪಿಂಗ್‌ನ ಸಾಮಾನ್ಯ ಗ್ರಾಹಕರಾಗಿದ್ದ ದಂಪತಿಗೆ ಕೆಲ ತಿಂಗಳ ಹಿಂದೆ ಕೊರಿಯರ್ ಬಂದಿತ್ತು.
ಅದರಲ್ಲಿ ಮೀಶೋ ಕಂಪನಿಯ 8ನೇ ವಾರ್ಷಿಕೋತ್ಸವದ ಹಿನ್ನೆಲೆ 15 ಲಕ್ಷ ರೂ. ನಗದು ಹಾಗೂ ಐಷಾರಾಮಿ ಕಾರಿನ ಬಹುಮಾನ ಪಡೆಯುವ ಅವಕಾಶ ಇರುವುದಾಗಿ ನಮೂದಿಸಲಾಗಿತ್ತು.
ಮೀಶೋ ಖಾಯಂ ಗ್ರಾಹಕರಾದ ನಿಮ್ಮನ್ನು ಲಕ್ಕಿ ಡ್ರಾಗೆ ಆಯ್ಕೆ ಮಾಡಲಾಗಿದೆ. ಹೆಚ್ಚಿ ವಿವರಗಳಿಗೆ ಈ ನಂಬರ್ ಅನ್ನು ಸಂಪರ್ಕಿಸಿ ಎಂದು ಬರೆಯಲಾಗಿತ್ತು.
ಇದನ್ನು ಮೋಸ ಎಂದು ಅರಿಯದ ದಂಪತಿ ಕೊರಿಯರ್‌ನಲ್ಲಿ ಬಂದಿದ್ದ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆ ಕಡೆಯಿಂದ ವಂಚಕರು ತಾವು ಮೀಶೋ ಸಿಬ್ಬಂದಿ ಎನ್ನುವಂತೆ ಬಿಂಬಿಸಿ, ದಂಪತಿಗೆ ಹಾಂಕಾಂಗ್ ಬ್ಯಾಂಕ್ ಖಾತೆ ತೆರೆಯಬೇಕು, ಅದಕ್ಕೆ 15 ಸಾವಿರ ರೂ. ಹಣ ಹಾಕಬೇಕು ಎಂದಿದ್ಧಾರೆ.
ಇದನ್ನು ನಂಬಿ ದಂಪತಿ ಈ ವರ್ಷ ಜನವರಿಯಲ್ಲಿ ಖಾತೆ ತೆಗೆದು 15 ಸಾವಿರ ರೂ. ಹಾಕಿದ್ದಾರೆ. ಬಳಿಕ ವಿವಿಧ ರೀತಿಯ ತೆರಿಗೆ ಕಟ್ಟಬೇಕು ಎಂದು ತಿಳಿಸುತ್ತಾ ವಂಚಕರು ಪದೇ ಪದೇ ಹಣ ಹಾಕಿಸಿಕೊಂಡಿದ್ಧಾರೆ.
ಆದರೆ ದಂಪತಿಗೆ ತಾವು ಮೋಸದ ಜಾಲಕ್ಕೆ ಬಿದ್ದಿದ್ದು ತಡವಾಗಿ ತಿಳಿದು ಬಂದಿದೆ. ಅಲ್ಲಿಯವರೆಗೆ ತಮ್ಮ ಹೊಲ ಮಾರಿ ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟಿದ್ದರು.
ಆ ಹಣ ದ್ವಿಗುಣಗೊಂಡಿದ್ದು, ಅದನ್ನು ಈ ವಂಚನೆಯಲ್ಲಿ ಕಳೆದುಕೊಂಡಿದ್ದಾರೆ. ಬಳಿಕ ತಮ್ಮ ಸ್ನೇಹಿತರ ಬಳಿಯೂ ದಂಪತಿ ಹಣ ಕೇಳಿದಾಗ ಸಂಶಯಗೊಂಡ ಅವರು, ಇದು ವಂಚನೆ ಎಂಬುದನ್ನು ಬಯಲಿಗೆಳೆದಿದ್ದಾರೆ.
ಬಳಿಕ ಬೆಂಗಳೂರಿನ ಹಾಂಕಾಂಗ್ ಬ್ಯಾಂಕ್ ಶಾಖೆಗೆ ಹೋಗಿ, ತಮ್ಮ ಹೆಸರಲ್ಲಿ ಖಾತೆ ತೆಗೆಯಲಾಗಿದೆಯೇ ಎಂದು ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಪಕ್ಕಾ ಆಗಿದೆ. ಇದೀಗ 52 ಲಕ್ಷ ರೂ. ವಂಚನೆಗಳೊಳಗಾದ ದಂಪತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸರ ಬಳಿ ಕಳೆದುಕೊಂಡ ಹಣವನ್ನು ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ.