ಹುಬ್ಬಳ್ಳಿ: ಶಾಲಾ ಬಾಲಕಿಯನ್ನು ಹಿಂಬಾಲಿಸಿ, ಚುಡಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಹಳೇಹುಬ್ಬಳ್ಳಿಯ ಅಯೋಧ್ಯೆ ನಗರ ನಿವಸಿಗಳಾದ ಶುಭಂ ತಡಸ, ಮೆಹಬೂಬ್ ಹಿತ್ತಲಮನಿ ಹಾಗೂ ಆರೋಪಿಗಳಿಗೆ ಸಾಥ್ ನೀಡಿದ್ದ ಸಾಗರ ಸಾತಪುತೆ, ಶ್ರೀವತ್ಸ ಬೆಂಡಿಗೇರಿ, ಸಚಿನ್ ನರೇಂದ್ರ ಎಂದು ಗುರುತಿಸಲಾಗಿದೆ.ಬಂಧಿತರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
ಆರೋಪಿಗಳಿಂದ 6 ಮೊಬೈಲ್, ಕೃತ್ಯಕ್ಕೆ ಬಳಿಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ಶುಭಂ ತಡಸ ವಿರುದ್ಧ ಈ ಹಿಂದೆ ಹಳೇಹುಬ್ಬಳ್ಳಿ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಸಚಿನ್ ನರೇಂದ್ರ ವಿರುದ್ಧ ಒಂದು ಕೇಸ್ ದಾಖಲಾಗಿದೆ.
ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷ್ನರ್ ಶಶಿಕುಮಾರ್ ಮಾಹಿತಿ ನೀಡಿದ್ದು, ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ್ದ ಘಟನೆ ಸಂಬಂಧ ಪೋಕ್ಸೋ ಪ್ರಕರಣ ದಾಖಲಾಗಿದೆ.
14 ವರ್ಷದ ಬಾಲಕಿ ಶಾಲೆ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಕಿಡಿಗೇಡಿಗಳು ಬೈಕ್ ನಲ್ಲಿ ಬಂದು ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದರು.
ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪ್ರಕರನವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ ಬಂಧಿಸಲಾಗಿದೆ.
ನಗರದ ಶಾಲೆ-ಕಾಲೇಜು, ಮಾರುಕಟ್ಟೆ, ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರು, ಮಕ್ಕಳು ದೂರು ನೀಡಲು ಹಿಂದೇಟು ಹಾಕಿದರೆ ಅಂತವರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.