ಇಲಕಲ್ :-ತಾಲೂಕಿನ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿಯಲ್ಲಿ ಸಂತ, ಶ್ರೇಷ್ಠ ಕವಿ, ದಾರ್ಶನಿಕರು ಭಕ್ತ ಕನಕದಾಸರ ಜಯಂತಿಯನ್ನು ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು. ಭಕ್ತ ಕನಕದಾಸರ ತತ್ವ, ಆದರ್ಶ ಪರಿಪಾಲನೆ ನಮಗೆಲ್ಲರಿಗೂ ಬಹುಮುಖ್ಯವಾಗಿದೆ. ಕನಕದಾಸರು ಸಾಮಾಜಿಕ ಚಿಂತನೆಯ ಹರಿಕಾರರು, ಸರಳ ಬದುಕಿನಲ್ಲಿ ಶ್ರೀಮಂತಿಕೆ ವ್ಯಕ್ತಿತ್ವ ಬೆಳೆಸಿಕೊಂಡವರು ಎಂದು ಪ್ರಾಸ್ತಾವಿಕವಾಗಿ ಶಾಲೆಯ ಸಹ ಶಿಕ್ಷಕರಾದ ಡಾ ವಿಶ್ವನಾಥ ತೋಟಿ ಮಾತನಾಡಿದರು. ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ ಎಂಬ ಜಾತಿ, ವರ್ಗ, ಪಂಗಡಗಳ ಬಗ್ಗೆ ಪ್ರಶ್ನೆ ಹಾಕಿ, ಸಮಾಜದಲ್ಲಿ ಸಮಾನತೆ ಬಿತ್ತಿದವರು ಸಂತ ಕನಕದಾಸರು. ಸರಳತೆ, ಭಕ್ತಿಯನ್ನು ತಮ್ಮ ಕೀರ್ತನೆಯ ಮೂಲಕ ಸಮಾಜವನ್ನು ತಿದ್ದುವಲ್ಲಿ ಬದುಕು ಸಾಗಿಸಿದರು ಎಂದು ಸಹ ಶಿಕ್ಷಕರಾದ ಬಸವರಾಜ ಬಲಕುಂದಿ ರವರು ಮಾತನಾಡಿದರು. ಶಾಲೆಯ ವಿದ್ಯಾರ್ಥಿನಿಯರು ಸಂತ ಕನಕದಾಸರ ಬಾಲ್ಯ, ವ್ಯಕ್ತಿತ್ವ, ಆದರ್ಶ ಬದುಕಿನ ಕುರಿತು ಮಾತನಾಡಿದರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಾಲಕರು, ಪೋಷಕರು, ಶಾಲೆಯ ಮುಖ್ಯ ಗುರುಮಾತೆ ಶ್ರೀಮತಿ ವಿ ಬಿ ಕುಂಬಾರ, ಸಹ ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ, ಶ್ರೀಮತಿ ಜಿ ಆರ್ ನದಾಫ್, ಸಹ ಶಿಕ್ಷಕರಾದ ಬಸವರಾಜ ಬಲಕುಂದಿ, ಡಾ. ವಿಶ್ವನಾಥ ತೋಟಿ, ಶ್ರೀ ಚಂದ್ರಶೇಖರ ಹುತಗಣ್ಣ, ಸಹ ಶಿಕ್ಷಕಿ ಕುಮಾರಿ ಅಶ್ವಿನಿ ಕಪ್ಪರದ, ಶಿಕ್ಷಣ ಪ್ರೇಮಿ ಗೋಪಿ ಶಿಂಧೆ, ಇನ್ನಿತರರು ಸಂತ ಕನಕದಾಸರ ಜಯಂತಿಗೆ ಶುಭಾಶಯ ಕೋರಿದರು. ಶಾಲಾ ಮಂತ್ರಿ ಮಂಡಲ ನಿರೂಪಸಿ, ಸ್ವಾಗತಿಸಿ, ವಂದಿಸಿದರು.
ವರದಿ :-ದಾವಲ್ ಶೇಡಂ