ಬೆಂಗಳೂರು : ಯಾವಾಗ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಕುರಿತು ಆರೋಪ ಕೇಳಿ ಬಂದಿತೊ, ಆಗಲೇ ಕಾಂಗ್ರೆಸ್ಸಿನ ಹಲವು ನಾಯಕರು ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದರು. ಅಲ್ಲದೆ, ಗೃಹ ಸಚಿವ ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರ ಹೆಸರು ಕೇಳಿ ಬಂದಿತು.
ಇದೀಗ ಸಚಿವ ಕೆ ಹೆಚ್ ಮುನಿಯಪ್ಪ ಅವರಿಗೂ ಸಿಎಂ ಸ್ಥಾನ ಸಿಗಲಿ ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಆಗ್ರಹಿಸಿದ್ದಾರೆ.
ರಾಜ್ಯ ಮಾದಿಗ ಪ್ರಾಧ್ಯಾಪಕರ ವೇದಿಕೆ ಆಯೋಜಿಸಿದ್ದ ಒಳ ಮೀಸಲಾತಿ ಚಿಂತನ ಮಂಥನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಯನ್ನು ಸರ್ಕಾರ ಜಾರಿಗೆ ತರಬೇಕು.
ಮುಖ್ಯಮಂತ್ರಿ ಹುದ್ದೆಯನ್ನು ನಮ್ಮ ಸಮುದಾಯದವರಿಗೆ ನೀಡಬೇಕು. ನಾಲ್ಕು ದಶಕಗಳಿಂದ ಪಕ್ಷಕ್ಕೆ ನಿಷ್ಠವಾಗಿರುವ ಕೆ.ಎಚ್.ಮುನಿಯಪ್ಪ ಅವರು ಸಿಎಂ ಆಗಲಿ ಎಂದು ಮಾದಾರ ಶ್ರೀಗಳು ಒತ್ತಾಯಿಸಿದ್ದಾರೆ.
ಪಕ್ಷಕ್ಕಾಗಿ ಮುನಿಯಪ್ಪ ಮಾಡಿದ ತ್ಯಾಗವನ್ನು ಗೌರವಿಸಬೇಕಿದೆ, ಅವರ ದೀರ್ಘಕಾಲದ ತ್ಯಾಗವನ್ನು ಇನ್ನಾದರೂ ಕಾಂಗ್ರೆಸ್ ಗೌರವಿಸಲಿ. ಕೆಪಿಸಿಸಿ ಅಧ್ಯಕ್ಷ ಸ್ಥಾನವಾಗಲಿ ಅಥವಾ ಉಪ ಮುಖ್ಯಮಂತ್ರಿ ಸ್ಥಾನವಾಗಲಿ ನಮ್ಮ ಸಮುದಾಯದವರಿಗೆ ಇದುವರೆಗೆ ಸಿಕ್ಕಿಲ್ಲ ಎಂದು ಮಾದಾರ ಚನ್ನಯ್ಯ ಸ್ವಾಮೀಜಿಗಳು ಹೇಳಿದ್ದಾರೆ.