ಚಿತ್ರದುರ್ಗ : ಪತಿಯ ಸಾವಿನಿಂದ ಮನನೊಂದ ಪತ್ನಿ ಹಾಗೂ ಪುತ್ರಿಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದಲ್ಲಿ ಈ ಒಂದು ದುರಂತ ಸಂಭವಿಸಿದೆ.
ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದಲ್ಲಿ ತಾಯಿ ಗೀತಾ (45) ಮಗಳು ಲಾವಣ್ಯ (17) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಒಂದು ವಾರದ ಬಳಿಕ ಬೆಳಕಿಗೆ ಬಂದಿದೆ.
ವಾರದ ಹಿಂದೆಯೇ ತಾಯಿ ಮಗಳು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇಂದು ಕೊಳೆತ ಸ್ಥಿತಿಯಲ್ಲಿ ತಾಯಿ ಮತ್ತು ಮಗಳ ಶವಗಳು ಪತ್ತೆಯಾಗಿವೆ. ಪತಿ ಸಾವಿನಿಂದ ಖಿನ್ನತೆಗೆ ಒಳಗಾಗಿ ಗೀತಾ ಹಾಗೂ ಪುತ್ರಿ ಲಾವಣ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಆರು ತಿಂಗಳ ಹಿಂದೆ ಗೀತಾಪತಿ ಬಸವರಾಜ್ ಹೃದಯಘಾತದಿಂದ ಸಾವನ್ನಪ್ಪಿದ್ದರು. ಪತಿ ಬಸವರಾಜ್ ಸಾವಿನಿಂದ, ಗೀತಾ ಹಾಗೂ ಮಗಳು ಲಾವಣ್ಯ ತೀವ್ರವಾಗಿ ಮನನೊಂದಿದ್ದರು ಹಾಗಾಗಿ ಒಂದು ವಾರದ ಹಿಂದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಘಟನೆ ಕುರಿತಂತೆ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.