ಬೆಳಗಾವಿ:-ದಾಸ ಶ್ರೇಷ್ಠ ಕನಕದಾಸರ ಜಯಂತಿ ನಿನ್ನೆ ತಾನೇ ಮುಗಿದಿದೆ. ದರ ನಿಮಿತ್ಯ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ರಾಜ್ಯಾದ್ಯಂತ ಇರುವ ವಲಸಿಗ ಕುರಿಗಾಹಿ ಕುಟುಂಬಗಳ ಬದುಕಿನ ಭವಣೆಗಳ ಸಮಸ್ಯೆಗಳ ಕುರಿತು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಖನಗಾವಿಯ ಕುರಿಗಾಹಿ ಸಮಸ್ಯೆಗಳ ಬಗ್ಗೆ ಸಾಂದರ್ಭಿಕವಾಗಿ ವರದಿ ಸಂಗ್ರಹಿಸಿ ಸರ್ಕಾರದ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ.
ಅಷ್ಟಕ್ಕೂ ಕುರಿಗಾಹಿ ಕುಟುಂಬಗಳೆಂದರೆ ಸಾಕು ರಾಜ್ಯದ ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಿ, ಬಯಲು ಪ್ರದೇಶಗಳಲ್ಲಿ ಹಿಂಡು ಹಿಂಡಾಗಿ ಕುರಿಗಳನ್ನು ಮೆಯಿಸುತ್ತಾ ಕಂಬಳಿ ಹೊದ್ದು,ಕಡಿದಾದ ಚಪ್ಪಲಿ ಧರಿಸಿ ಕೈ ಕೋಲು ಹಿಡಿದು ಬೆಳಿಗ್ಗೆಯಿಂದ ಸಂಜೆವರೆಗೂ ಕುರಿಗಳನ್ನು ಮೆಯಿಸಿಕೊಂಡು ಬರುವುದೇ ಕುರಿಗಾಹಿ ಕುಟುಂಬಗಳ ದಿನನಿತ್ಯದ ಕಾಯಕ. ಇನ್ನೂ ಉತ್ತರ ಕರ್ನಾಟಕ ಬಹುತೇಕ ಜಿಲ್ಲೆಗಳು ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಬಹುತೇಕ ತಾಲ್ಲೂಕುಗಳ ಗ್ರಾಮೀಣ ಪ್ರದೇಶಗಳ ಹೊಲಗಳಲ್ಲಿ ಕುರಿಗಳ ಜೊತೆ ತನ್ನ ಸಂಸಾರ ಕಟ್ಟಿಕೊಂಡು ರೈತರು ಕೊಡೋ ಹಣ ಪಡೆದು ವಾಸಿಸುವ ಈ ಕುರಿಗಾಹಿ ಕುಟುಂಬಗಳ ಪರಿಸ್ಥಿತಿ ಹಾಗೂ ಸಮಸ್ಯೆಗಳು ನಿಜಕ್ಕೂ ಹೇಳತೀರದು ಕಣ್ರೀ.
ಒಂದು ಕಡೆ ಕುರಿಗಳನ್ನು ಆಹಾರ ಹರಸಿ ದಿನನಿತ್ಯ ಮೇಯಿಸಿ ಕೊಂಡು ಬರುವುದೇ ದಿನನಿತ್ಯ ಸವಾಲಿನ ಕೆಲಸವಾದರೆ ಇನ್ನೊಂದು ಕಡೆ ಬಿಸಿಲು, ಚಳಿ, ಗಾಳಿ ಮತ್ತು ಮಳೆಗೆ ಕುರಿಗಳು ಮತ್ತು ಕುರಿಗಾಹಿ ಕುಟುಂಬಗಳು ಸಿಡಿಲು, ಅಪಘಾತಗಳಲ್ಲಿ ಸಾವನ್ನಪ್ಪಿರುವ ನಿದರ್ಶನ ತುಂಬಾನೇ ಇವೆ, ಮತ್ತೊಂದು ಕುರಿಗಳು ಇತ್ತೀಚಿಗೆಗಂತೂ ಹಲವು ರೋಗಗಳಿಗೆ ತುತ್ತಾಗುತ್ತಿವೆ.
ಇನ್ನೊಂದು ಕಡೆ ಹೊರಗಿನ ಕೆಲ ದುಷ್ಕರ್ಮಿಗಳು ಮತ್ತು ರಾತ್ರಿವೇಳೆ ತೋಳ, ನರಿಗಳ ಕಾಟ ಇನ್ನೊಂದು ಕಡೆ ಕಾಡಂಚಿನ ಪ್ರದೇಶಗಳಲ್ಲಿ ಉಳಿದಾಗ ಕಾಡು ಪ್ರಾಣಿಗಳ ಹಾವಳಿ ಹೀಗೆ ಹತ್ತು ಹಲವಾರು ಸಮಸ್ಯೆಗಳ ನಡುವೆ ದಿನನಿತ್ಯ ಬದುಕುತ್ತಿರುವ ಈ ಕುಟುಂಬಗಳಿಗೆ ಸರ್ಕಾರದಿಂದ ಬರುವ ಕನಿಷ್ಠ ಸೌಲಭ್ಯಗಳು ದೊರಕದೇ ಇರುವುದು ತುಂಬಾನೇ ಶೋಚನೀಯ ಸಂಗತಿಯಾಗಿದೆ. ಅಷ್ಟಕ್ಕೂ ಬಹುತೇಕ ಕುಟುಂಬಗಳಿಗೆ ಪಡಿತರ ಕಾರ್ಡ್ ಸಹ ದೊರೆಯದೇ ಇರುವ ಕಾರಣ ಕುರಿಗಾಹಿ ಕುಟುಂಬಗಳಿಗೆ ಪಡಿತರ ಅಕ್ಕಿ ಸಿಕ್ಕಿಲ್ಲವಂತೆ, ಇನ್ನೊಂದು ಗ್ಯಾರಂಟಿ ಭಾಗ್ಯಗಳ ಪ್ರಮುಖ ಯೋಜನೆ ಗೃಹ ಲಕ್ಸ್ಮಿ ಯೋಜನೆಯಿಂದ ಈ ಕುರಿಗಾಹಿ ಕುಟುಂಬಗಳ ಹೆಣ್ಣುಮಕ್ಕಳು ವಂಚಿತ ರಾಗಿರುವುದು ತುಂಬಾ ದುರ್ದೈವದ ಸಂಗತಿ.
ಮತ್ತೊಂದು ಕಡೆ ಕುರಿಗಳು ಅನಾರೋಗ್ಯ ಅಥವಾ ಸತ್ತರೆ ಇವರಿಗೆ ಪಶು ಇಲಾಖೆ ಕೇಂದ್ರಗಳು ಕನಿಷ್ಠ ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡದೇ ಇರುವ ಕಾರಣ ಇವರು ಖಾಸಗಿ ಮೆಡಿಕಲ್ ಶಾಪ್ ಗಳನ್ನೇ ಅವಲಂಬಿಸುವ ಪರಿಸ್ಥಿತಿ ಆಗಿದೆ ಎನ್ನುತ್ತಾರೆ ಈ ಕುರಿಗಾಹಿ ಕುಟುಂಬಗಳ ಸದಸ್ಯರು. ಇವೆಲ್ಲಾ ನೋಡಿದ್ರೆ ಕುರಿಗಾಹಿ ಕುಟುಂಬಗಳಿಗೆ ಅಷ್ಟು ಸೌಲಭ್ಯ ಕೊಟ್ಟಿದ್ದೇವೆ, ಇಷ್ಟು ಕೊಟ್ಟಿದ್ದೇವೆ ಎಂದು ಬೊಬ್ಬೆ ಹೊಡೆಯುವ ಸರ್ಕಾರಗಳು ಮತ್ತು ಇಲಾಖೆಗಳ ಘೋಷಣೆಗಳು, ಆದೇಶಗಳು ಬರೀ ನೆಪ ಮಾತ್ರಕ್ಕೆ ಅನ್ನಿಸುತ್ತಿವೆ. ಆದ್ದರಿಂದ ಜಿಲ್ಲಾದ್ಯಂತ ಇರುವ ಕುರಿಗಾಹಿ ಕುಟುಂಬಗಳ ಪರವಾಗಿ ಸಮಗ್ರವಾಗಿ ವರದಿ ತಯಾರಿಸಿ ಬೆಳಗಾವಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಬೆಳಗಾವಿ ಜಿಲ್ಲಾ ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕರು ಆದ ಡಾ.ರಾಜೀವ್ ಕುಲೇರ ಹಾಗೂ ಆಹಾರ ಇಲಾಖೆಯ ಉಪ ನಿರ್ದೇಶಕರು ಆದ ಮಲ್ಲಿಕಾರ್ಜುನ ಅವರ ಗಮನಕ್ಕೆ ತೆಗೆದುಕೊಂಡು ಬಂದು ಅವರ ಅಭಿಪ್ರಾಯ ಸಂಗ್ರಹ ಮಾಡಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಕುರಿಗಾಹಿ ಕುಟುಂಬಗಳಿಗೂ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ದೊರಕುವುವೇ ಎಂಬುದನ್ನು ಕಾದುನೋಡಬೇಕಿದೆ.
ವರದಿ:- ಬಸವರಾಜು.