ಬೆಂಗಳೂರು : ಕಳೆದ ವರ್ಷದ ಕೊನೆಯಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದ ವೇಳೆ ಪರಿಷತ್ನಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವರ್ಗಾಯಿಸಿದೆ.
ಈ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರು, ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದಾರೆ.
ಸಿಐಡಿ ತನಿಖೆಗೆ ವಹಿಸಿರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದಿರುವ ಹೊರಟ್ಟಿಯವರು, ಯಾವ ಕಾರಣಕ್ಕೆ CIDಗೆ ಪ್ರಕರಣದ ತನಿಖೆಗೆ ವಹಿಸಿದ್ದಾರೆಂದು ತಿಳಿದಿಲ್ಲ ಎಂದಿದ್ದಾರೆ.
ಸದನದಲ್ಲಿ ನಡೆದ ಘಟನೆ ಬಗ್ಗೆ ಚರ್ಚಿಸುವುದು, ತೀರ್ಮಾನಿಸುವುದರಲ್ಲಿ ಸದನಕ್ಕೆ ಅಧಿಕಾರ ಇರುತ್ತದೆ. ಘಟನೆಗೆ ಸಂಬಂಧಿಸಿ ಪರಾಮರ್ಶಿಸಿ ಪೀಠದಿಂದ ತೀರ್ಪು ನೀಡಲಾಗಿದೆ. ಸದನದ ಆವರಣದ ಒಳಗೆ ಶಿಸ್ತು ಕಾಪಾಡುವುದು, ನಿಯಂತ್ರಿಸುವ ಅಧಿಕಾರ ಸಭಾಪತಿಗೆ ಪ್ರದತ್ತವಾಗಿದೆ.
ಹೀಗಾಗಿ ಸಭಾಪತಿಗಳ ತೀರ್ಪು ಈ ಪ್ರಕರಣದಲ್ಲಿ ಅಂತಿಮವಾಗಿರುತ್ತದೆ. ಗೌರವದೊಂದಿಗೆ ನಮ್ಮ ಕರ್ತವ್ಯ ನಿರ್ವಹಿಸಬೇಕಿದೆ. ಸಿಐಡಿಗೆ ವಹಿಸಿರುವ ಈ ಪ್ರಕರಣವನ್ನು ನಿರ್ವಹಿಸುತ್ತೀರಿ ಎಂದು ನಂಬಿರುವುದಾಗಿ ಪತ್ರದ ಮೂಲಕ ಹೊರಟ್ಟಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.