ಕಲಘಟಗಿ: –ತಾಲೂಕಿನ ಕೆ..ಹುಣಸಿಕಟ್ಟಿ ಗ್ರಾಮದಲ್ಲಿ ಮತ್ತೊಂದು ಚಿರತೆ ದಾಳಿ ನಡೆದಿದ್ದು, ಒಂದೂವರೆ ವರ್ಷದ ಹೋರಿ ಘಟನೆಯಲ್ಲಿ ಗಂಭೀರ ಗಾಯಗೊಂಡಿದೆ.
ಕೆ.ಹುಣಸಿಕಟ್ಟಿ ಗ್ರಾಮದ ಶಿವಾನಂದ ಭೀಮನಗೌಡ ಗೊಲ್ಲಗೌಡರ ಎಂಬುವವರಿಗೆ ಸೇರಿದ ಹೋರಿ ಚಿರತೆ ದಾಳಿಗೆ ಗಂಭೀರ ಗಾಯಗೊಂಡಿದೆ. ಗ್ರಾಮದ ಹೊರವಲಯದ ಜಮೀನಿನಲ್ಲಿ ಮರವೊಂದಕ್ಕೆ ಕಟ್ಟಿದಾಗ ಚಿರತೆ ಹೊಂಚು ಹಾಕಿ ದಾಳಿ ನಡೆಸಿದೆ.
ಹೋರಿ ಕೊರಳಿಗೆ ಚಿರತೆ ಬಾಯಿ ಹಾಕಲು ಮುಂದಾದಾಗ ಹೋರಿ ಪ್ರತಿರೋಧ ತೋರಿದೆ. ಇಷ್ಟಕ್ಕೆ ಸುಮ್ಮನಾಗದ ಚಿರತೆ ಕಾಲುಗಳಿಗೆ ಬಾಯಿ ಹಾಕಿದ್ದರಿಂದ ಹೋರಿಯ ಮುಂದಿನ ಎರಡು ಕಾಲುಗಳು ಮುರಿದಿವೆ. ಹತ್ತಿರದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೋಗಾಟ, ಚೀರಾಟ ಮಾಡಿದ್ದರಿಂದ ಚಿರತೆ ಕಬ್ಬಿನ ಗದ್ದೆಯಲ್ಲಿ ಓಡಿ ಹೋಗಿ ತಲೆ ಮರೆಸಿಕೊಂಡಿದೆ.
ಹತ್ತು ದಿನಗಳಲ್ಲಿ ಮೂರನೇ ದಾಳಿ:ಕೆ.ಹುಣಸಿಕಟ್ಟಿ ಗ್ರಾಮದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಚಿರತೆ ಹಾವಳಿ ವಿಪರೀತ ಎನಿಸಿದೆ. ವಾರದ ಹಿಂದೆ ಸಂಗಮೇಶ ಪಾಟೀಲ ಎಂಬುವವರಿಗೆ ಸೇರಿದ ಎರಡು ಕುರಿಮರಿ, ಮಲ್ಲನಗೌಡ ಪಾಟೀಲ ಎಂಬುವವರಿಗೆ ಸೇರಿದ ಜಾನುವಾರು ಸೇರಿದಂತೆ ಗ್ರಾಮದ ಬೀದಿನಾಯಿಗಳ ಮೇಲೆ ಚಿರತೆ ದಾಳಿ ನಡೆಸಿದೆ.
ಚಿರತೆ ಸೆರೆಗೆ ಆಗ್ರಹ:’ಚಿರತೆ ಉಪಟಳದಿಂದ ಗ್ರಾಮಸ್ಥರು ಭಯದಿಂದ ಓಡಾಡುವಂತಾಗಿದೆ. ಜಮೀನುಗಳಿಗೆ ಕೆಲಸಕ್ಕೆ ಹೋಗಲು ಕೃಷಿಕರು ಹಿಂದೇಟು ಹಾಕುತ್ತಿದ್ದಾರೆ. ಚಿರತೆ ದಾಳಿ ಪದೇ ಪದೇ ದಾಳಿ ನಡೆಸುತ್ತಿದ್ದರೂ ಬಂಧಿಸುವ ಪ್ರಕ್ರಿಯೆ ನಡೆಸಿಲ್ಲ. ಅರಣ್ಯ ಇಲಾಖೆ ಆಯ್ದ ಸ್ಥಳಗಳಲ್ಲಿ ಸಿಸಿ ಟಿವಿ ಹಾಗೂ ಬೋನು ಇಟ್ಟು ಚಿರತೆ ಬಂಧಿಸಬೇಕು’ ಎಂದು ಕೆ.ಹುಣಸಿಕಟ್ಟಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಉಪ ವಲಯ ಅರಣ್ಯಾಧಿಕಾರಿ ಕೆ.ಎಲ್. ಬೇವಿನಕಟ್ಟಿ, ಗಸ್ತು ಅರಣ್ಯ ಪಾಲಕರು ಮೋಸಿನ್ ಗುಳಗುಂದಿ, ಅರಣ್ಯ ವೀಕ್ಷಕ ಈರಪ್ಪ ಆನಿ ಹಾಗೂ ಗ್ರಾಮಸ್ಥರು ಇದ್ದರು.
ವರದಿ : ಶಶಿಕುಮಾರ ಕಲಘಟಗಿ