ಬೆಂಗಳೂರು: ಹೊಸ ವರ್ಷಾಚರಣೆಗೂ ಮುನ್ನ ಮಾರಾಟಕ್ಕೆ ಯೋಜನೆ ರೂಪಿಸಿದ್ದ 3.25 ಕೋಟಿ ಮೌಲ್ಯದ 318 ಕೆ.ಜಿ ಗಾಂಜಾವನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಗೋವಿಂದಪುರ ಪೊಲೀಸರು, ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಮೂವರನ್ನು ಸ್ಥಳದಲ್ಲೇ ಬಂಧಿಸಿ, ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ, ಕೇರಳ ಮೂಲದ ಪ್ರಮುಖ ಆರೋಪಿಯು ಮಾದಕ ದ್ರವ್ಯ ಮಾರಾಟದ ಇತಿಹಾಸವನ್ನು ಹೊಂದಿದ್ದಾನೆ. ಅಲ್ಲದೇ ಈತ ಈಗಾಗಲೇ ತನ್ನ ತವರು ರಾಜ್ಯದಲ್ಲಿ ಅನೇಕ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ತಯಾರಿ ನಡೆಸಲು ಗಾಂಜಾವನ್ನು ಬೆಂಗಳೂರಿಗೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಸಮಯದಲ್ಲಿ ಮಾದಕವಸ್ತುಗಳ ಬೇಡಿಕೆಯು ನಗರದಲ್ಲಿ ಸಾಮಾನ್ಯವಾಗಿ ಹೆಚ್ಚಾಗುತ್ತದೆ.
ಸದ್ಯ ಎಲ್ಲೆಲ್ಲಿ ಪೂರೈಕೆ ಆಗುತ್ತೆ ಎಂಬುದನ್ನು ಬಹಿರಂಗಪಡಿಸಲು ಮತ್ತು ಈ ಕಾರ್ಯಾಚರಣೆಯಲ್ಲಿ ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆ ಪೊಲೀಸರು ಈಗ ಹೆಚ್ಚಿನ ಲಿಂಕ್ಗಳನ್ನು ತನಿಖೆ ಮಾಡುತ್ತಿದ್ದಾರೆ.
ಕಳೆದ ತಿಂಗಳು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (CCB) ಮಾದಕ ದ್ರವ್ಯ ನಿಯಂತ್ರಣ ಘಟಕವು ನಗರದ ವಿದೇಶಿ ಅಂಚೆ ಕಚೇರಿಯಲ್ಲಿ ನಡೆಸಿದ ಪ್ರಮುಖ ಕಾರ್ಯಾಚರಣೆಯಲ್ಲಿ 21.17 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿತ್ತು.