ಮೊಳಕಾಲ್ಮುರು: ಪಟ್ಟಣದ ಹಾನಗಲ್ ರಸ್ತೆಯ ಪರ್ನ್ನೀಚರ್ ವ್ಯಾಪಾರಿ ಅನ್ವರ್ ಭಾಷಾಗೆ ದೆಹಲಿ ಮೂಲದವನೆಂದು ತಿಳಿಸಿ ನಕಲಿ ಚಿನ್ನದ ಸರ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರು ಎಲ್‌ಬಿಎಸ್ ನಗರದ ಸ್ಲಂಬೋರ್ಡ್ ಜೀಪಡಿ ಮೂಲದ ದೇವಿಲಾಲ್ (59) ಎಂದು ಗುರುತಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಪಟ್ಟಣಕ್ಕೆ ಆಗಮಿಸಿದ್ದ ದೇವಿಲಾಲ್ ನನ್ನದು ದೆಹಲಿ, ನಾವು ಬಿಜಾಪುರದಲ್ಲಿ ಮನೆ ಕಟ್ಟಲು ನೆಲವನ್ನು ಅಗೆದಾಗ ಬಂಗಾರ ಇರುವ ಹುಂಡಿ ದೊರೆತಿದೆ. ಇದನ್ನು ಸ್ಥಳೀಯರಿಗೆ ಮಾರಾಟ ಮಾಡಿದರೆ ಅವರಿವರಿಗೆ ತಿಳಿಯುತ್ತದೆ. ಹಾಗಾಗಿ ಕಡಿಮೆ ಬೆಲೆಗೆ ನಿಮಗೆ ಕೊಡುತ್ತೇನೆ ಎಂದು ಡೀಲ್ ಕುದುರಿಸಿಕೊಂಡು ಎರಡು ದಿನದ ನಂತರ ಸ್ಯಾಂಪಲ್ ತರುತ್ತೇನೆ ಎಂದು ಹೇಳಿ ವಾಪಾಸಾಗಿದ್ದಾನೆ.
ಶನಿವಾರ ಬೆಳಿಗ್ಗೆ ಪುನಃ ಆಗಮಿಸಿ 2 ಕೆ.ಜಿ.ತೂಕದ ಚಿನ್ನವನ್ನು 30 ಲಕ್ಷ ರೂಗೆ ಕೊಡುವುದಾಗಿ ತಿಳಿಸಿದ್ದಾನೆ. ತನ್ನಲ್ಲಿನ ಉದ್ದನೆಯ ಸರದ ತುಂಡನ್ನು ಕತ್ತರಿಸಿ ಕೊಟ್ಟು. ಇದನ್ನು ಪರೀಕ್ಷಿಸಿ ನೋಡಿ ಎಂದು ತಿಳಿಸಿದ್ದಾನೆ. ಇಷ್ಟೊಂದು ಪ್ರಮಾಣದ ಚಿನ್ನವನ್ನು ಕೇವಲ 30 ಲಕ್ಷ ರೂಗೆ ಕೊಡುವುದಾಗಿ ತಿಳಿಸಿದ್ದಕ್ಕೆ ಅನುಮಾನಗೊಂಡ ಖರೀದಿದಾರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಈ ಚಿನ್ನವನ್ನು ಅಕ್ಕಸಾಲಿಗರ ಬಳಿ ಪರೀಕ್ಷಿಸಿದಾಗ ಇದು ನಕಲಿ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಈ ವಂಚಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.