ಬೆಂಗಳೂರು : ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟಿ ಅದಿತಿ ಪ್ರಭುದೇವ 31ನೇ ವಸಂತಕ್ಕೆ ಕಾಲಿಟ್ಟಿದ್ದು ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳು ಮಹಾಪೂರವೇ ಹರಿದು ಬಂದಿದೆ.
2016ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗುಂಡ್ಯಾನ ಹೆಂಡ್ತಿ’ ಧಾರವಾಹಿಯಲ್ಲಿ ಕಮಲಿ ಪಾತ್ರದ ಮೂಲಕ ಚಿರಪರಿಚಿತರಾದ ಇವರು ಬಳಿಕ ‘ನಾಗಕನ್ನಿಕೆ’ ಧಾರವಾಹಿಯಲ್ಲಿ ಕಾಣಿಸಿಕೊಂಡರು. ಅದೇ ಸಮಯದಲ್ಲಿ ಅಜಯ್ ರಾವ್ ಜೊತೆ ‘ಧೈರ್ಯಂ’ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು.
ಕಿರುತೆರೆಯಿಂದ ದೂರ ಉಳಿದ ಅದಿತಿ ಪ್ರಭುದೇವ ನಂತರ ‘ಬಜಾರ್’ ‘ಆಪರೇಷನ್ ನಕ್ಷತ್ರ’ ‘ಸಿಂಗ’ ‘ಬ್ರಹ್ಮಚಾರಿ’ ‘ಆನ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು. ಇತ್ತೀಚಿಗಷ್ಟೇ ಅದಿತಿ ಪ್ರಭುದೇವ ಅಭಿನಯದ ‘ಛೂ ಮಂತರ್’ ಚಿತ್ರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ‘ಮಾಫಿಯಾ’ ‘ದಿಲ್ಮಾರ್’ ಶೂಟಿಂಗ್ ಅನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಇದರ ಬೆನ್ನಲ್ಲೇ ‘ಅಂದೊಂದಿತ್ತು ಕಾಲ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.