ಬೆಂಗಳೂರು : ಆ ಒಂದು ಸಮುದಾಯದ ಮತಗಳು ಸಿಗದ ಕಾರಣಕ್ಕೆ ನಾನು ಚನ್ನಪಟ್ಟಣದಲ್ಲಿ ಸೋಲು ಅನುಭವಿಸಿದೆ ಎಂಬ ಎನ್ಡಿಎ ಪರಾಭವ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿಕೆಯನ್ನು ಹಿರಿಯ ರಾಜಕಾರಣಿ ಸಿ.ಎಂ.ಇಬ್ರಾಹಿಂ ಖಂಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಆಗ ನೀನಿನ್ನೂ ಹುಟ್ಟಿರಲ್ಲಿಲ್ಲ ಅನ್ಸುತೆ, ಅಂದು ನಿಮ್ಮ ಅಜ್ಜ ಹೆಚ್.ಡಿ.ದೇವೇಗೌಡ ಅವರು ಸಾಬ್ರು ಮತಗಳಿಂದಲೇ ಮುಖ್ಯಮಂತ್ರಿ ಆಗಿದ್ದರು. ಮುಂದೆ ಪ್ರಧಾನಿಯೂ ಆದ್ರು ಎಂದು ಇಬ್ರಾಹಿಂ ತಿರುಗೇಟು ನೀಡಿದ್ದಾರೆ.
ಅಪ್ಪಾ..ನಿಖಿಲಾ.. ಚನ್ನಪಟ್ಟಣದಲ್ಲಿ ಎಷ್ಟಿದ್ದಾರೆ ಅಲ್ಪ ಸಂಖ್ಯಾತರ ಮತಗಳು ಎಂದು ಪ್ರಶ್ನಿಸಿರುವ ಇಬ್ರಾಹಿಂ, 25 ಸಾವಿರ ಮತಗಳ ಅಂತರದಿಂದ ಯೋಗೇಶ್ವರ್ 1 ಲಕ್ಷದ 5 ಸಾವಿರ ಮತಗಳನ್ನು ಪಡೆದು ಗೆದ್ದಿದ್ದಾರೆ. 85 ಸಾವಿರ ಮತಗಳು ಯಾರದ್ದು ಹೇಳು? ಅದರಲ್ಲಿ ಒಕ್ಕಲಿಗರು, ದಲಿತರು, ಅಹಿಂದ ಮತಗಳಿಲ್ವಾ ಎಂದು ಕೇಳಿದ್ದಾರೆ.
ಇನ್ನೂ ಯಾಕೆ ನೀವು ನಿಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳೋಕೆ ಮುಸ್ಲಿಮರನ್ನು ಅಪಮಾನ ಮಾಡುತ್ತೀರಿ. ನಿಮ್ಮ ದೌರ್ಬಲ್ಯದಿಂದಲೇ ನೀವು ಸೋತಿದ್ದೀರಿ. ನಿಮ್ಮಪ್ಪಗೆ ನಮ್ಮವರು ವೋಟ್ ಕೊಟ್ಟಿಲ್ವಾ? ಮಗಾ ನಿಖಿಲಾ… ನಿಮ್ಮಜ್ಜನಿಗೆ 32 ಸಾವಿರ ಜನ ಸಾಬ್ರು ರಾಮನಗರದಲ್ಲಿ ಮತ ನೀಡಿದ್ದಕ್ಕೇ ಅಂದು ಅವರು ಸಿಎಂ ಆದ್ರು ಎಂದು ಮಾತಲ್ಲೇ ಇಬ್ರಾಹಿಂ ತಿವಿದಿದ್ದಾರೆ.