ಕನಕಪುರ : ರಾಜ್ಯದ ಮಹಿಳೆಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಫನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕನಕಪುರದ ರೂರಲ್ ಕಾಲೇಜು ಮೈದಾನದಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟದ ವತಿಯಿಂದ ನಡೆದ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸ್ತ್ರೀಯರ ಹಾಗೂ ಸ್ತ್ರೀ ಶಕ್ತಿ ಸಂಘಗಳ ಪಾತ್ರ ಬಹಳ ದೊಡ್ಡದು.
ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿದ್ದೇನೆ ಈ ಹಿಂದೆ ಎಸ್.ಎಂ. ಕೃಷ್ಣ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಮೋಟಮ್ಮ ಅವರು ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳನ್ನು ಆರಂಭಿಸಿ, ಆರ್ಥಿಕ ಶಕ್ತಿ ತುಂಬಿದರು.
ಈಗ ಅದೇ ಇಲಾಖೆಯ ಮೂಲಕ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿರುವುದು ನನ್ನ ಪಾಲಿನ ಅದೃಷ್ಟ. ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರನ್ನು ಸ್ವಾವಲಂಬಿಯಾಗಿ ಸುವ ಉದ್ದೇಶ ನನ್ನದು. ಹಾಗಾಗಿ ಗೃಹಲಕ್ಷ್ಮಿ ಸಂಘಗಳ ಮೂಲಕ ಮಹಿಳೆಯರಿಗೆ ಮತ್ತಷ್ಟು ಶಕ್ತಿ ತುಂಬಲಾಗುವುದು ಎಂದು ತಿಳಿಸಿದರು.
ಮಹಿಳೆಯರು ಕಾಲಿಡದ ಕ್ಷೇತ್ರವಿಲ್ಲ, ಸಾಧನೆ ಮಾಡದ ವಿಷಯವಿಲ್ಲ, ಅಡುಗೆ ಮನೆಯಿಂದ ಚಂದ್ರಯಾನದವರೆಗೆ ಪ್ರತಿಯೊಂದರಲ್ಲೂ ನಾವು ಸಿದ್ದಹಸ್ತರು ಎನ್ನುವುದನ್ನು ಜಗತ್ತಿಗೆ ತೋರಿಸಿದ್ದೇವೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸ್ತ್ರೀಯರ, ಸ್ತ್ರೀ ಶಕ್ತಿ ಸಂಘಗಳ ಪಾತ್ರ ಈಗ ದೊಡ್ಡದಿದೆ. ಕನಕಾಂಬರಿ ಮಹಿಳಾ ಒಕ್ಕೂಟದ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ.