ಬಳ್ಳಾರಿ : ಜಿಲ್ಲೆಯ ಸಿರುಗುಪ್ಪ ನಗರದ ಬಸ್ ನಿಲ್ದಾಣದಲ್ಲಿ ಸುಮಾರು ಮೂರು ದಿನಗಳಿಂದ ಮನೆಯ ಕೌಟುಂಬಿಕ ಸಮಸ್ಯೆಯ ಹಿನ್ನಲೆಯಲ್ಲಿ ವಾಸವಾಗಿದ್ದ ಕುಂಟ ಲೋಕಪ್ಪ ತಂದೆ ಮುನಿಯಪ್ಪ ಸಾ. ಕೆಂಚನಗುಡ್ಡ ತಾಂಡಾ ವಯಸ್ಸು- 73 ಈತನನ್ನು ಸಾರಿಗೆ ನಿಯಂತ್ರಣ ಅಧಿಕಾರಿಗಳಾದ ಹರೀಶ್ ಹಾಗೂ ಪೊಲೀಸ್ ಇಲಾಖೆಯ ಪಿ.ಎಸ್.ಐ.ಗಳಾದ ಶ್ರೀನಿವಾಸಲು ಊಟ ವಸತಿ ಕಲ್ಪಿಸಿ ರಕ್ಷಣೆ ಮಾಡಿ ಸಿಂಧನೂರಿನ ಕಾರುಣ್ಯ ಆಶ್ರಮಕ್ಕೆ ಮಾಹಿತಿ ನೀಡಿದರು.
ತಕ್ಷಣ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಸಿರುಗುಪ್ಪ ಪೊಲೀಸ್ ಠಾಣೆಗೆ ಭೇಟಿ ನೀಡಿ ಆತನ ಸಂಪೂರ್ಣ ವಿವರವನ್ನು ತಿಳಿದುಕೊಂಡು ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ಕೆಂಚನಗುಡ್ಡ ತಾಂಡಾದ ಯುವ ಮುಖಂಡರಾದ ಧನಸಿಂಗ್ ನಾಯಕ್ ಅವರನ್ನು ಸಂಪರ್ಕಿಸಿ ಮಗನನ್ನು ಪೊಲೀಸ್ ಠಾಣೆಗೆ ಕರೆತಂದರು. ನಂತರ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷರು ಆತನಿಗೆ ಬುದ್ಧಿವಾದ ಹೇಳುವ ಮೂಲಕ ಮಗನ ಜೊತೆ ಕಳಿಸಿಕೊಟ್ಟ ಘಟನೆ ನೆಡೆಯಿತು.
ಈ ಸಮಯದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ.ಚನ್ನಬಸವಸ್ವಾಮಿ ಹಿರೇಮಠ ಮಾತನಾಡಿ ಇಂತಹ ವೃದ್ಧರು ಹೀನಾಯ ಸ್ಥಿತಿಯಲ್ಲಿದ್ದಾಗ ಅವರನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ.
ಆದರೆ ಸಿರುಗುಪ್ಪ ಸಾರಿಗೆ ನಿಯಂತ್ರಣ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳು ಈತನನ್ನು ಸುಮಾರು ಮೂರು ದಿನಗಳ ಕಾಲ ಸ್ವಂತ ತಂದೆಯ ಹಾಗೆ ನೋಡಿಕೊಂಡಿರುವುದು.
ನಮ್ಮ ಭಾರತೀಯ ಕರುಣಾಮಯಿ ಸಂಸ್ಕೃತಿಗೆ ಮೆರುಗು ತಂದುಕೊಟ್ಟಿದೆ. ನಾವು ನಮ್ಮ ಆಶ್ರಮದಲ್ಲಿ ನಿಜವಾದ ಅನಾಥರಿಗೆ ಮಾತ್ರ ಆಶ್ರಯ ಕೊಡುವುದು ನಮ್ಮ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಅದೆಷ್ಟೋ ಜನ ಕುಟುಂಬದಿಂದ ಮನನೊಂದು ಬಂದಾಗ ತಾತ್ಕಾಲಿಕ ಆಶ್ರಯ ನೀಡುತ್ತೇವೆ.
ನಂತರ ಅವರ ಕುಟುಂಬದವರಿಗೆ ಸಂಪೂರ್ಣವಾಗಿ ತಿಳಿದುಕೊಂಡು ಕುಟುಂಬಸ್ಥರಿಗೆ ಬುದ್ಧಿ ಹೇಳಿ ಸುಮಾರು ವ್ಯಕ್ತಿಗಳನ್ನು ಅವರವರ ಮನೆಗೆ ಕಳುಹಿಸಿದ್ದೇವೆ. ಆದರೆ ಈತನಿಗೆ ಮಗನು ಇದ್ದಾನೆ ಎಂದು ಗೊತ್ತಾದಾಗ ಆತನಿಗೆ ಬುದ್ಧಿ ಹೇಳಿ ಪುನಃ ಮಗನ ಜೊತೆ ಕಳಿಸಿರುವುದು ನಮಗೆ ಆತ್ಮ ತೃಪ್ತಿ ತಂದಿದೆ ಎಂದು ಮಾತನಾಡಿದರು. ಪೊಲೀಸ್ ಇಲಾಖೆ ಹಾಗು ಕಾರುಣ್ಯಾಶ್ರಮದ ಬುದ್ಧಿಮಾತಿನಿಂದ ಈ ವೃದ್ಧನ ಮಗನಾದ ವೆಂಕಟೇಶ ತಂದೆ ಕುಂಟ ಲೋಕಪ್ಪ ಮುಂದಿನ ದಿನಮಾನಗಳಲ್ಲಿ ನನ್ನ ತಂದೆಯನ್ನು ಪ್ರೀತಿ ವಿಶ್ವಾಸ ಗೌರವದಿಂದ ಕಾಣುತ್ತೇನೆ.
ದಯಮಾಡಿ ತಾವುಗಳೆಲ್ಲರೂ ಕ್ಷಮೆ ಮಾಡಿ ಎಂದು ಬೇಡಿಕೊಂಡು ತಂದೆಯನ್ನು ಪ್ರೀತಿಯಿಂದ ಮನೆಗೆ ಕರೆದುಕೊಂಡು ಹೋದನು. ಈ ಸಮಯದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಶ್ರೀನಿವಾಸಲು ಪಿ.ಎಸ್.ಐ. ಗುಪ್ತಚರ ಇಲಾಖೆ ಸಿರುಗುಪ್ಪ. ಹಾಗೂ ಕೋರಿ ಬಸವರಾಜ ಪೊಲೀಸ್ ಅಧಿಕಾರಿಗಳು. ಧನಸಿಂಗ್ ನಾಯಕ ಕೆಂಚನಗುಡ್ಡ. ಮತ್ತು ಆಶ್ರಮದ ಸಿಬ್ಬಂದಿಗಳಾದ ಮರಿಯಪ್ಪ ಹಾಗೂ ಕೆಂಚನ ಗುಡ್ಡ ತಾಂಡಾದ ಹಲವಾರು ಯುವಕರು ಉಪಸ್ಥಿತರಿದ್ದರು.
ವರದಿ.ಶ್ರೀನಿವಾಸ ನಾಯಕ್