ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಕಾಣಿಸಿಕೊಂಡ ಭಿನ್ನಮತ ಶಮನ ಮಾಡುವ ನಿಟ್ಟಿನಲ್ಲಿ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸರಣಿ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ಕೋರ್ ಕಮಿಟಿ ಸಭೆಯೂ ನಡೆಯಲಿದೆ. ಆದರೆ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಮಾತ್ರ ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸರಣಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಶಾಸಕರು ಹಾಗೂ ಪ್ರಮುಖ ನಾಯಕರು ಹಾಜರಾಗಲಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಕೂಡಾ ಈ ಸಭೆಗೆ ಆಗಮಿಸಲಿದ್ದಾರೆ.
ಸಭೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಶಾಸಕರು ಮತ್ತು ಪ್ರಮುಖ ನಾಯಕರ ಅಭಿಪ್ರಾಯಗಳನ್ನು ಪಡೆಯಲಾಗುತ್ತದೆ. ಆದರೆ ಈ ಸಭೆಗೆ ಎಸ್ ಟಿ ಸೋಮಶೇಖರ್ ಮಾತ್ರ ಗೈರಾಗಿದ್ದಾರೆ.
ಬದಲಾಗಿ, ಬೆಳಗಾವಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕ ಎಸ್,ಟಿ. ಸೋಮಶೇಖರ್ ಭಾಗಿಯಾಗಿದ್ದಾರೆ. ಹೀಗಾಗಿ ಎಸ್ ಟಿ ಎಸ್ ನಡೆ ಅಚ್ಚರಿ ಮೂಡಿಸಿದೆ. ಇದೇ ವಿಚಾರವಾಗಿ ಮಾತನಾಡಿರುವ ಅವರು, ಸರ್ಕಾರದ ಕಾರ್ಯಕ್ರಮಕ್ಕೆ ಆಹ್ವಾನ ಇತ್ತು, ಹಾಗಾಗಿ ಬಂದಿದ್ದೇನೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಬಿಜೆಪಿ ಸಂಘಟನಾ ಸಭೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಸಂಘಟನಾ ಸಭೆ, ಕೋರ್ ಕಮಿಟಿ ಬಗ್ಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದ್ದಾರೆ.
ಅಂತರ ಕಾಯ್ದುಕೊಂಡಿರುವ ಇಬ್ಬರು ಶಾಸರು ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಗೊಂಡಿದ್ದ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಬಿಜೆಪಿ ಶಾಸಕರಾಗಿದ್ದರೂ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಪಕ್ಷದ ಯಾವುದೇ ಸಭೆ ಸಮಾರಂಭಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ. ಹಾಗಿದ್ದರೂ ಅವರು ಪಕ್ಷ ತೊರೆಯುವ ನಿರ್ಧಾರವನ್ನು ಮಾಡುತ್ತಿಲ್ಲ.
ಬಿಜೆಪಿ ಪಕ್ಷದಲ್ಲೇ ಇದ್ದು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡುತ್ತಿರುವಂತೆ ಅವರ ನಡೆಗಳು ಸ್ಪಷ್ಟಗೊಳಿಸುತ್ತಿವೆ. ಅಧಿವೇಶನದ ಸಂದರ್ಭದಲ್ಲೂ ಸದನದಲ್ಲಿ ಕಾಂಗ್ರೆಸ್ ಸರ್ಕಾರದ ಪರವಾಗಿಯೇ ಮಾತನಾಡುತ್ತಿದ್ದಾರೆ. ಇದು ಬಿಜೆಪಿ ನಾಯಕರಿಗೂ ಒಂದು ರೀತಿಯಲ್ಲಿ ಮುಜುಗರವನ್ನು ಉಂಟು ಮಾಡಿದೆ.
ಕ್ರಮ ಏಕಿಲ್ಲ?
ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಅಧಿಕೃತವಾಗಿ ಭಾಗಿಯಾಗುತ್ತಿದ್ದರೂ ಅವರ ವಿರುದ್ಧ ರಾಜ್ಯ ಬಿಜೆಪಿ ನಾಯಕತ್ವ ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ. ಅಷ್ಟೇ ಅಲ್ಲದೆ, ಅವರ ಜೊತೆಗೆ ಮಾತುಕತೆ ನಡೆಸಿ ಸಮಸ್ಯೆಯನ್ನೂ ಬಗೆಹರಿಸುತ್ತಿಲ್ಲ. ಬಿಜೆಪಿ ನಾಯಕರ ನಡೆಯೂ ಕುತೂಹಲ ಕೆರಳಿಸಿದೆ.




