ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ಜಗಳ ತಾರಕಕ್ಕೇರಿದ್ದು, ಇದರ ಬೆನ್ನಲ್ಲೇ ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಪಕ್ಷದ ವಿರುದ್ಧ ಸದಾ ಹೇಳಿಕೆ ನೀಡುತ್ತಿರುವ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ.
ಬಿಜೆಪಿ ಕೇಂದ್ರೀಯ ಸಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ ನೀಡಲಾಗಿದ್ದು, 10 ದಿನದೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ. ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧದ ನಿಲುವು ಹಿನ್ನೆಲೆಯಲ್ಲಿ ಯತ್ನಾಳ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಸದ್ಯ ಯತ್ನಾಳ್ ದೆಹಲಿಯಲ್ಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಯತ್ನಾಳ್ ನಿರಂತರ ಹೇಳಿಕೆ ನೀಡುತ್ತಿದ್ದರು. ವಿಜಯೇಂದ್ರ ದೆಹಲಿಗೆ ತೆರಳಿ ವರಿಷ್ಠರ ಭೇಟಿಯಾಗಿ ರಾಜ್ಯದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಯತ್ನಾಳ್ ಅವರಿಗೆ ಬಿಜೆಪಿ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ ನೀಡಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಬಣ ತಿಕ್ಕಾಟ ಮತ್ತಷ್ಟು ಜೋರಾಗಿದ್ದು, ಯತ್ನಾಳ್ ಟೀಂ ದೆಹಲಿಗೆ ತೆರಳಿ ದೂರು ನೀಡಲು ಮುಂದಾಗಿದೆ. ವಿಜಯೇಂದ್ರ ಪರ ಬ್ಯಾಟಿಂಗ್ ನಡೆಸಲು ಮತ್ತೊಂದು ತಂಡ ಕೂಡ ದೆಹಲಿಗೆ ಹೊರಟಿದೆ.
ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗಿ ವಿಜಯೇಂದ್ರ ವಿರುದ್ಧ ದೂರು ಸಲ್ಲಿಸಲು ಯತ್ನಾಳ್ ತಂಡ ಮುಂದಾಗಿದೆ ಎಂದು ಹೇಳಲಾಗಿದೆ. ಯಡಿಯೂರಪ್ಪ ನಿಷ್ಠರ ಪಡೆ ಕೂಡ ಸಕ್ರಿಯವಾಗಿದ್ದು, ಪ್ರತಿ ದೂರು ಸಲ್ಲಿಸಲು ದೆಹಲಿಗೆ ಹೊರಟಿದೆ. ಇದೇ ಹೊತ್ತಲ್ಲಿ ಯತ್ನಾಳ್ ಗೆ ಬಿಜೆಪಿ ಶಿಸ್ತು ಸಮಿತಿಯಿಂದ ನೋಟಿಸ್ ನೀಡಲಾಗಿದೆ.