ಧಾರವಾಡ:ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದ ಪ್ಯಾನ್ ಇಂಡಿಯಾ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿ ಆಂದೋಲನದ ಅಂಗವಾಗಿ ಧಾರವಾಡದಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ್ ಕಾರ್ಮಿಕ ಕಾಯ್ದೆ ಕುರಿತು ಜಾಗೃತಿ ಮೂಡಿಸಲು ಜಾತಾ ಕಾರ್ಯಕ್ರಮವನ್ನು ಧಾರವಾಡ ನಗರದ ಸಪ್ತಾಪೂರ, ವಿವೇಕಾನಂದ ವೃತ್ತದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಬರಮನಿ ಅವರು ಚಾಲನೆ ನೀಡಿದರು.

ನಂತರ ಪಿ.ಎಫ್. ದೊಡ್ಡಮನಿ ಅವರು ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿಯು ಒಂದು ಸಾಮಾಜಿಕ ಸಮಸ್ಯೆಯಾಗಿದ್ದು, ಈ ಬಾಲಕಾರ್ಮಿಕ ಪದ್ಧತಿಯನ್ನು ಹೊಗಲಾಡಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಬಹಳ ಅವಶ್ಯಕವಾಗಿದೆ. ಹಾಗೂ ಶಾಲಾ ಮಕ್ಕಳಲ್ಲಿ ಈ ಕುರಿತು ಜಾಗೃತಿಯನ್ನು ಮೂಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ನಾರಾಯಣ ಬರಮನಿ ಅವರು ಮಾತನಾಡಿ, ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವ ಮಾಲೀಕರಿಗೆ ಕಾಯ್ದೆಯಡಿ ರೂ. 20 ರಿಂದ 50 ಸಾವಿರದವರೆಗೆ ದಂಡ ಇಲ್ಲವೇ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಕಾರ್ಮಿಕ ಅಧಿಕಾರಿಗಳಾದ ಅಕ್ಬರ್ ಮುಲ್ಲಾ, ಮಾರಿಕಾಂಬ ಹುಲಕೋಟಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಬಸವರಾಜ್ ಸಿ.ಪಿ., ಹಿರಿಯ ಕಾರ್ಮಿಕ ನಿರೀಕ್ಷಕರಾದ ಭುವನೇಶ್ವರಿ ಕೋಟಿಮಠ, ಮೀನಾಕ್ಷಿ ಶಿಂದಿಹಟ್ಟಿ, ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶೋಭಾ ಕುಸುಗಲ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕೆ. ವಿ. ಕೌಜಲಗಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಂತರ ಧಾರವಾಡ ಕೆಲಗೇರಿ ಸುತ್ತಲಿನಲ್ಲಿ ನಡೆಯುತ್ತಿರುವ ಇಟ್ಟಿಗೆ ಭಟ್ಟಿಗಳಿಗೆ ಭೇಟಿ ನೀಡಿ, ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಜಾಗೃತಿ ಮೂಡಿಸಲಾಯಿತು.
ವರದಿ: ವಿನಾಯಕ ಗುಡ್ಡದಕೇರಿ




