ಚಾಮರಾಜನಗರ : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪವರ್ ಶೇರಿಂಗ್ ಒಪ್ಪಂದದ ಗದ್ದಲದ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ತಾವು ರಾಜಕೀಯ ಕೊನೆಗಾಲದಲ್ಲಿರುವುದಾಗಿ ಹೇಳಿಕೆ ನೀಡಿದ್ದು ಭಾರೀ ಸಂಚಲನ ಮೂಡಿಸಿದೆ.
ಇಂದು ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು, ಕೊಳ್ಳೇಗಾಲದ ಸತ್ತೇಗಾಲದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೇದಿಕೆ ಮೇಲೆ ಜನರನ್ನುದ್ದೇಶಿಸಿ ಮಾತನಾಡಿದ ಸಿಎಂ, ನೋಡ್ರಯ್ಯಾ ನಾನು ರಾಜಕೀಯದ ಕೊನೆಗಾಲದಲ್ಲಿದ್ದೇನೆ ಎಂದರು.ಅವರ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.
ಇತ್ತೀಚೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಾವು ಒಂದು ಒಪ್ಪಂದಕ್ಕೆ ಬಂದಿದ್ದೇವೆ ಎಂಬ ಹೇಳಿಕೆಯಿಂದ ಶುರುವಾದ ಸಿಎಂ ಅಧಿಕಾರದ ಹಂಚಿಕೆ ವಿವಾದವು, ಸಚಿವ ಪರಮೇಶ್ವರ್ ಅವರನ್ನು ಗರಂ ಆಗುವಂತೆ ಮಾಡಿತ್ತು.
ಅಲ್ಲದೇ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಡಿಕೆಶಿ ಹೇಳಿದ್ದು ನಿಜ ಎಂದು ಮತ್ತೇ ಸದ್ದು ಮಾಡಿದರು. ಇದರ ಬೆನ್ನಲ್ಲೇ ಈ ಬಗ್ಗೆ ಯಾರೂ ಮಾತನಾಡಕೂಡದು ಎಂದು ಡಿಕೆಶಿ ಇಂದು ವಾರ್ನಿಂಗ್ ಮಾಡಿದರು. ಇದೀಗ ಇಂದಿನ ಕಾರ್ಯಕ್ರಮದ ವೇದಿಕೆಯಲ್ಲೇ ಸಿಎಂ ತಮ್ಮ ಹೇಳಿಕೆ ನೀಡಿದ್ದು, ಹೊಸ ಚರ್ಚೆಗೆ ಗ್ರಾಸವಾಗಿದೆ.
ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೀರಿ ಎಂದು ಜೆ.ಹೆಚ್.ಪಟೇಲರಿಗೆ ಆಗಿನ ಕೆಲ ಶಾಸಕರು ಹೇಳಿದ್ದರು. ಆ ದಿನಗಳಿಂದ ಅಂತಹ ಕಳಂಕ ಚಾಮರಾಜನಗರ ಮೇಲಿದೆ. ನಾನು 2ನೇ ಬಾರಿಗೆ ಸಿಎಂ ಆಗಿ ಇಲ್ಲಿಗೆ ಬಂದಿದ್ದೇನೆ. ನಾನು ಯಾವ ಮೂಢನಂಬಿಕೆಯನ್ನು ನಂಬಲ್ಲ ಎಂದರು.