ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ನಿಷೇಧಿತ ಕಂಪೆನಿಗಳಿಂದ ಕಿಕ್ ಬ್ಯಾಕ್ ಪಡೆದು ಬ್ಲ್ಯಾಕ್ ಲಿಸ್ಟ್ನಲ್ಲಿರುವ ಕಂಪನಿಗಳಿಗೆ ಟೆಂಡರ್ ಕೊಟ್ಟಿದ್ದು, ಇದರಿಂದ ದೊಡ್ಡ ಪ್ರಮಾಣದಲ್ಲಿ ಬಾಣಂತಿಯರ ಸಾವು ಸಂಭವಿಸುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಗಂಭೀರವಾಗಿ ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 8 ತಿಂಗಳುಗಳಿಂದ ಅಲ್ಲಲ್ಲಿ ನಿರಂತರವಾಗಿ ಬಾಣಂತಿಯರ ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಸರಕಾರವು ಬಾಣಂತಿಯರ ಶವದ ಮೇಲೆ ಜನಕಲ್ಯಾಣ ಸಮಾವೇಶ ಮಾಡುತ್ತಿದೆ ಎಂದು ಟೀಕಿಸಿದರು.
ದೋಷಪೂರಿತ ಐವಿ ಫ್ಲೂಯಿಡ್‍ನಿಂದ ಬಾಣಂತಿಯರ ಸಾವಾಗಿದೆ; ರಾಜ್ಯ ಸರ್ಕಾರ ಕಿಕ್ ಬ್ಯಾಕ್ ಪಡೆದುದೇ ಇಂಥ ಕಳಪೆ ಗುಣಮಟ್ಟದ ಐವಿ ಫ್ಲೂಯಿಡ್ ಪೂರೈಕೆಗೆ ನೇರ ಕಾರಣ. ಆರೋಗ್ಯ ಸಚಿವರು ಬಳ್ಳಾರಿ ಭೇಟಿಯು ಮೊಸಳೆಕಣ್ಣೀರಿನ ಭೇಟಿ ಎಂದು ಟೀಕಿಸಿದ ರಾಜೀವ್, ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಇಲ್ಲದ ಆರೋಗ್ಯ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.