ಚಿತ್ರದುರ್ಗ: ಅಧಿಕಾರ ಹಂಚಿಕೆ ಬಗ್ಗೆ ಸಿಎಂ, ಡಿಸಿಎಂ ಅವರನ್ನು ಕೇಳಿ. ಅವರಿಂದ ಸ್ಪಷ್ಟ ಉತ್ತರ ಸಿಗಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ನನಗೆ ಕೇಳಿದರೆ, ನಾನು ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಉತ್ತರಿಸಲು ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆಯ ಕುರಿತಾಗಿ ಅವರನ್ನೇ ಕೇಳಿ ಎಂದರು.
ಒಂದು ಪಕ್ಷದಲ್ಲಿ, ಕುಟುಂಬದಲ್ಲಿ ಘರ್ಷಣೆಗಳು ಸಹಜ. ಸದ್ಯ ನಾವು ಸಚಿವರಾಗಿ ಕೆಲಸ ಮಾಡುತ್ತಿದ್ದೇವೆ. ಈಗ ಸಿಎಂ, ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಚರ್ಚೆ ಅನಗತ್ಯ. 2028ಕ್ಕೆ ನಾವು ಸಿಎಂ ಹುದ್ದೆಗೆ ಪ್ರಯತ್ನ ಮಾಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಕುರಿತಂತೆ ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಇದನ್ನು ಅಲ್ಲಗಳೆದಿದ್ದರು. ಅಧಿಕಾರ ಹಂಚಿಕೆ ಕುರಿತಂತೆ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಆಕ್ಷೇಪಿಸಿ, ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್ ಇಬ್ಬರೇ ಒಪ್ಪಂದ ಮಾಡಿಕೊಂಡ್ರೆ ನಾವೆಲ್ಲಾ ಯಾಕಿರಬೇಕು ಎಂದು ಪ್ರಶ್ನಿಸಿದ್ದರು.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದು ನಿಜ. ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿರುವುದು ಸರಿ ಇದೆ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದರು. ಈ ಬಗ್ಗೆ ಯಾರೂ ಮಾತಾಡಬಾರದು ಎಂದು ಡಿ.ಕೆ. ಶಿವಕುಮಾರ್ ಈ ಕುರಿತಾದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.