ಬೆಳಗಾವಿ: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಮುಂದುವರಿದಿದ್ದು, ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಬ್ಬರು ಬಾಣಂತಿ ಮೃತಪಟ್ಟಿದ್ದಾರೆ. ಕರಡಿಗುದ್ದಿ ಗ್ರಾಮ ನಿವಾಸಿ ಗಂಗವ್ವ ಗೊಡಕುಂದ್ರಿ (31) ಮೃತ ದುರ್ದೈವಿ.
ಜನವರಿ 28ಕ್ಕೆ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮೃತ ಗಂಗವ್ವ ಗೊಡಕುಂದ್ರಿ ಅವರಿಗೆ ಲೋ ಬಿಪಿ ಹಿನ್ನೆಲೆಯಲ್ಲಿ ಆರೋಗ್ಯ ಏರುಪೇರಾಗಿತ್ತು.ಇದೇ ಕಾರಣಕ್ಕೆ ಜನವರಿ 31 ರಂದು ಕುಟುಂಬಸ್ಥರಿಗೆ ವೈದ್ಯರು ಮಾಹಿತಿ ನೀಡಿದ್ದರು.
ಆದರೆ ವೈದ್ಯರು ಮಾಹಿತಿ ನೀಡಿದ ಸ್ಪಲ್ಪ ಹೊತ್ತಿಗೆ ಬಾಣಂತಿ ಗಂಗವ್ವ ಗೊಡಕುಂದ್ರಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಗಂಗವ್ವ ಗೊಡಕುಂದ್ರಿ ಕುಟುಂಬಸ್ಥರಿಂದ ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡ ಆರೋಪ ಕೇಳಿಬಂದಿದೆ.
ಮತ್ತೊಂದು ಕಡೆಯಲ್ಲಿ ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗಂಗವ್ವ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಕಳೆದ ವರ್ಷ ಬೆಳಗಾವಿ ಜಿಲ್ಲೆಯಲ್ಲಿ 29 ಬಾಣಂತಿಯರು, 322 ಶಿಶುಗಳು ಮೃತಪಟ್ಟ ಮಾಹಿತಿ ಇದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದ ಕಾರಣ ಹಾಗೂ ರಕ್ತಸ್ರಾವ ಸೇರಿದಂತೆ ವೈದ್ಯರ ನಿರ್ಲಕ್ಷ್ಯವೂ ಈ ಸಾವಿಗೆ ಕಾರಣ ಎನ್ನಲಾಗಿದೆ.