ಪ್ರಯಾಗ್ ರಾಜ್ : ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಮತ್ತು ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಪ್ರಮುಖವಾದ ಮಹಾ ಕುಂಭಮೇಳ ಈ ವರ್ಷ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿದೆ. ಮಹಾಕುಂಭ ಮೇಳಕ್ಕೆ ತೆರಳುವ ಭಕ್ತರ ಸಂಖ್ಯೆ ದಿನೇ ದಿನ ಹೆಚ್ಚಾಗುತ್ತಿದೆ.
ದೇಶದ ವಿವಿಧ ಕಡೆಯಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ರೈಲು, ವಿಮಾನದ ವ್ಯವಸ್ಥೆ ಮಾಡಲಾಗಿದೆ. ಇದರ ನಡುವೆ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರಿ ಮಹತ್ವದ ಘೋಷಣೆ ಮಾಡಿದೆ.
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರಿ ಮಹಾಕುಂಭ ಮೇಳ ಭಕ್ತರಿಗೆ ಉಚಿತ ಪ್ರಯಾಣ, ಉಚಿತ ಊಟ ಹಾಗೂ ಉಚಿತ ಔಷಧಿಗಳ ತೀರ್ಥ ಯಾತ್ರಿ ಸೇವಾ ಯೋಜನೆ ಘೋಷಣೆ ಮಾಡಿದೆ. ಈ ಯೋಜನೆ ಈಗಾಗಲೇ ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ಆರಂಭಗೊಂಡಿದೆ.
ಈ ಕುರಿತು ಮಾತನಾಡಿರುವ ರಿಲಯನ್ಸ್ ಇಂಡಸ್ಟ್ರಿ ನಿರ್ದೇಶಕ ಅನಂತ್ ಅಂಬಾನಿ, ಮಹಾಕುಂಭ ಮೇಳ ಅತೀ ದೊಡ್ಡ ಹಿಂದೂ ಧರ್ಮದ ಆಧ್ಯಾತ್ಮಿಕ ಹಬ್ಬ. ಈ ಪುಣ್ಯ ದಿನಗಳಲ್ಲಿ ರಿಲಯನ್ಸ್ ಇಂಡಸ್ಟ್ರಿ, ಇಲ್ಲಿಗೆ ಆಗಮಿಸುತ್ತಿರುವ ಕೋಟ್ಯಾಂತರ ಭಕ್ತರ ಆರೋಗ್ಯ, ಸುರಕ್ಷತೆ, ಪ್ರಯಾಣ, ಆಹಾರ ಕುರಿತು ಕಾಳಜಿ ವಹಿಸಲಿದೆ. ಈ ಮೂಲಕ ಭಕ್ತರ ಆಧ್ಯಾತ್ಮಿಕ ಪ್ರಯಾಣ ಸುಗಮವಾಗಿಸಲು ರಿಲಯನ್ಸ್ ನೆರವಾಗಲಿದೆ ಎಂದಿದ್ದಾರೆ.
ಮಹಾಕುಂಭ ಮೇಳದಲ್ಲಿ ಭಕ್ತರಿಗೆ ಸಣ್ಣ ಸೇವೆ ನೀಡುವ ಅವಕಾಶ ಒದಗಿ ಬಂದಿರುವುದು ನಮ್ಮ ಸೌಭಾಗ್ಯ ಎಂದಿದ್ದಾರೆ. ಭಕ್ತರ ಆಧ್ಯಾತ್ಮಿಕತೆಯಲ್ಲಿ ರಿಲಯನ್ಸ್ ಸಣ್ಣ ಕೊಡುಗೆ ನೀಡುತ್ತಿದೆ. ಮಹಾಕುಂಭ ಮೇಳದ ಆಶೀರ್ವಾದದೊಂದಿಗೆ ಈ ಸೇವೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.