ಬೆಳಗಾವಿ : ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ನೇತೃತ್ವದಲ್ಲಿ ಹೊರತಂದಿರುವ ಎಸ್ ಎಸ್ ಎಲ್ ಸಿ ಮಾರ್ಗದರ್ಶಿ ಕೈಪಿಡಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಶನಿವಾರ ಬಿಡುಗಡೆಗೊಳಿಸಿದರು.
ಮಕ್ಕಳಿಗಾಗಿ ದಾನಿಗಳ ಮೂಲಕ ಆರು ವಿಷಯಗಳ ಸಂಪನ್ಮೂಲ ವ್ಯಕ್ತಿಗಳ ಪರಿಶ್ರಮದಿಂದ ಸಿದ್ಧವಾಗಿರುವ ಈ ಕೈಪಿಡಿಯ ಸದುಪಯೋಗವನ್ನು ಶಿಕ್ಷಕರು ಮಕ್ಕಳು ಪಡೆದುಕೊಳ್ಳಬೇಕು. ಮಕ್ಕಳಿಗೆ ನೆರವಾಗುವ ಈ ಯೋಜನೆಯನ್ನು ರೂಪಿಸಿದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರಿಗೂ ಹಾಗೂ ಅದಕ್ಕೆ ನೆರವಾದ ಸಕಲರಿಗೂ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಎಸ್ಎಸ್ಎಲ್ ಸಿ ಮಕ್ಕಳ ಫಲಿತಾಂಶ ಸುಧಾರಣೆಗಾಗಿ ವಿಜಯಪುರದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಸವರಾಜ ಕೌಲಗಿ ಅವರು ಕೈಪಿಡಿಯನ್ನು ಉಚಿತವಾಗಿ ಮುದ್ರಿಸಿ ಕೊಟ್ಟಿದ್ದಾರೆ. ಬೆಳಗಾವಿಯ ಗೃಹ ಕಚೇರಿಯಲ್ಲಿ ಸಚಿವರು ಕೈಪಿಡಿಯನ್ನು ಬಿಡುಗಡೆ ಮಾಡಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ : ಪ್ರತೀಕ ಚಿಟಗಿ