ಬೆಂಗಳೂರು: ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆಳಗಾವಿ ಅಧಿವೇಶನಕ್ಕೆ 100 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಡೆಸುತ್ತಿರುವ ಶತಮಾನೋತ್ಸವಕ್ಕೆ ಪ್ರತಿಯೊಬ್ಬ ಕಾಂಗ್ರೆಸಿಗನೂ ಸಾಕ್ಷಿಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸ ಆಚರಣೆ ಕುರಿತು ಕೆಪಿಸಿಸಿಯ ಭಾರತ ಜೋಡೋ ಭವನದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
1924ರಲ್ಲಿ ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನವಹಿಸಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೇತೃತ್ವ ವಹಿಸಿದರು. ಈ ಹಮ್ಮೆಯ ಕ್ಷಣವನ್ನು ಆಚರಿಸುವ ಅವಕಾಶ ಕಾಂಗ್ರೆಸ್ ಹಾಗೂ ಕಾಂಗ್ರೆಸಿಗರಿಗೆ ಮಾತ್ರ ಸಿಕ್ಕಿದೆ. ಹೀಗಾಗಿ ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಇದು ಪಕ್ಷದ ಜತೆಗೆ ಸರ್ಕಾರದ ಕಾರ್ಯಕ್ರಮವೂ ಆಗಿದೆ. ಎಚ್.ಕೆ. ಪಾಟೀಲ, ವೀರಪ್ಪ ಮೋಯ್ಲಿ, ಬಿ.ಎಲ್ ಶಂಕರ್ ನೇತೃತ್ವದಲ್ಲಿ ಸರ್ಕಾರದ ಸಚಿವರು ಹಾಗೂ ಪಕ್ಷದ ಮುಖಂಡರನ್ನೊಳಗೊಂಡ 60 ಸದಸ್ಯರ ಸಮಿತಿ ರಚಿಸಲಾಗಿದೆ. ಸರ್ಕಾರ ಹಾಗೂ ಪಕ್ಷದಿಂದ ಹೇಗೆ ಕಾರ್ಯಕ್ರಮ
ಮಾಡಬೇಕು ಎಂದು ಈ ಸಮಿತಿ ರೂಪುರೇಷೆ ಸಿದ್ಧಪಡಿಸಲಿದೆ ಎಂದರು. ಬೆಳಗಾವಿಯಲ್ಲಿ ಗಾಂಧಿಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜಾಗದಲ್ಲಿ ಡಿ.26 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು, ಎಲ್ಲ ರಾಜ್ಯಗಳ ಪ್ರದೇಶ
ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಸಿಎಲ್ ಪಿ ನಾಯಕರು, 150 ಸಂಸದರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ ಎಂದು
ಮಾಹಿತಿ ನೀಡಿದರು.
ಡಿ.27ರಂದು ಬೆಳಗ್ಗೆ 11 ಗಂಟೆಗೆ ಐತಿಹಾಸಿಕ ಸಮಾವೇಶ ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮ ಮತ್ತಷ್ಟು ಪವಿತ್ರವಾದ ಕಾರ್ಯಕ್ರಮವಾಗಿದ್ದು, ಇದು ಕೇವಲ ಬೆಳಗಾವಿಗೆ ಮಾತ್ರ ಸೀಮಿತವಾಗಬಾರದು. ಅಖಂಡ ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು. ನಾವು ಯಾರಿಗೂ ಉಳಿದುಕೊಳ್ಳುವ ಹಾಗೂ ಸಾರಿಗೆ ವ್ಯವಸ್ಥೆ
ಕಲ್ಪಿಸಿರುವುದಿಲ್ಲ. ಪ್ರತಿ ಬ್ಲಾಕ್ ಹಾಗೂ ವಿಧಾನಸಭಾ ಕ್ಷೇತ್ರಗಳಿಂದ ಹಣ ಕೊಟ್ಟು ಜನರನ್ನು ಕರೆತರುವುದು ಬೇಡ. ಪಂಚಾಯಿತಿ ಚುನಾವಣೆಯಲ್ಲಿ ನಿಂತು ಗೆದ್ದವರು, ಸೋತವರು, ವಿವಿಧ ಸಂಸ್ಥೆಗಳಲ್ಲಿ ನಾಮನಿರ್ದೇಶನ ಆಗಿರುವವರು, ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಸಮಿತಿ ಸದಸ್ಯರು, ಪಾಲಿಕೆ ಸದಸ್ಯರುಗಳನ್ನು ಕರೆತರಬೇಕು. ಬೆಂಗಳೂರು ವಲಯದಿಂದ ಆಗಮಿಸಬೇಕು ಎಂದು ತಿಳಿಸಿದರು.
ಮೈಸೂರು ದಸರಾವನ್ನು ಹೇಗ ನಾವು ವಿಜೃಂಭಣೆಯಿಂದ ಆಚರಣೆ ಮಾಡಿದ್ದೆವೋ ಅದೇ ರೀತಿ ಬೆಳಗಾವಿಯಲ್ಲೂ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲು ಸುಮಾರು 8 ಕೋಟಿ ವೆಚ್ಚದಲ್ಲಿ ಬೆಳಗಾವಿಯಲ್ಲಿ ದೀಪಾಲಂಕಾರ ಮಾಡಲಾಗುವುದು ಎಂದರು.
ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಿತ್ತೂರು ಕರ್ನಾಟಕ ಭಾಗದ ಎಲ್ಲ ಕ್ಷೇತ್ರಗಳಲ್ಲಿ ಡಿ.20-21ರಂದು ಪಕ್ಷದಿಂದ ಕಾರ್ಯಕರ್ತರ ಜಾಗೃತಿ ಸಭೆ ಮಾಡಿ ಈ ಕಾರ್ಯಕ್ರಮದ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು. ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರುಗಳು ಈ ಸಭೆಗಳಿಗೆ ವೀಕ್ಷಕರಾಗಿ ತೆರಳಿ ಯಾವ ಕ್ಷೇತ್ರದಿಂದ ಎಷ್ಟು ಜನರನ್ನು ಹೊರಡಿಸುತ್ತಿದ್ದಾರೆ ಎಂದು ಮಾಹಿತಿ ಕಲೆಹಾಕಬೇಕು. ಈ ಭಾಗದ ಪ್ರತಿ ಕ್ಷೇತ್ರದಿಂದ ಕನಿಷ್ಟ 5000 ಜನರನ್ನು ಸಮಾವೇಶಕ್ಕೆ ಕರೆತರಬೇಕು.
ಇದೊಂದು ದೊಡ್ಡ ಸಮಾವೇಶವಾಗಿದ್ದು, ಇದನ್ನು ಯಶಸ್ವಿಗೊಳಿಸಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.ಪಕ್ಷದ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಸಚಿವ ಎಂ.ಸಿ ಸುಧಾಕರ್, ಮಾಜಿ ಸಚಿವ ಎಚ್.ಆಂಜನೇಯ, ವಿ.ಎಸ್. ಉಗ್ರಪ್ಪ, ಎಂ.ವಿ.ರಾಜೀವ್ಗೌಡ, ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ಅಶೋಕ್ ಕುಮಾರ್, ಪಲ್ಲವಿ ಮತ್ತಿತರ ಪಕ್ಷದ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.