ಬೆಂಗಳೂರು : ರಾಜ್ಯದಲ್ಲಿಯೇ ಮೊದಲ ಬಾರಿಗೆ ಪದ್ಮನಾಭ ನಗರದಲ್ಲಿ ಆರಂಭಗೊಂಡಿರುವ ಗ್ಯಾರಂಟಿ ಯೋಜನೆಗಳ ಮನೆ ಮನೆ ಭೇಟಿ ಅಭಿಯಾನವನ್ನು ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ. ಕೃಷ್ಣಪ್ಪ ಉದ್ಘಾಟನೆ ಮಾಡಿದರು.
ಹೊಸಕೆರೆಹಳ್ಳಿ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆರಂಭಿಸಿದ್ದು, ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ನೇತೃತ್ವದಲ್ಲಿ ಅಭಿಯಾನ ಆರಂಭಗೊಂಡಿದೆ. ಪ್ರಮೋದ್ ಶ್ರೀನಿವಾಸ್ ಗ್ಯಾರಂಟಿ ಯೋಜನೆಗಳನ್ನು ಮನೆಮನೆಗೆ ತಲುಪಿಸಲು ಅನೇಕ ವಿನೂತನ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ.
ಅಭಿಯಾನವನ್ನು ಹೊಸಕೆರೆಹಳ್ಳಿಯ ಬಸವಣ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಿಸಲಾಯಿತು. ಮಾಜಿ ಬಿಬಿಎಂಪಿ ಸದಸ್ಯ ಎಚ್. ನಾರಾಯಣ್ ಸೇರಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣಪ್ಪ, ಕಾಂಗ್ರೆಸ್ ಸರಕಾರ ಬಡವರ ಯೋಜನೆಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬದ್ಧತೆಯಿಂದ ಸರಕಾರ ಜನಪರ ಯೋಜನೆಯನ್ನು ಜಾರಿಗೊಳಿಸಿದೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಜವಾಬ್ದಾರಿ ಗ್ಯಾರಂಟಿ ಅನುಷ್ಠಾನ ಸಮಿತಿಯದ್ದಾಗಿದ್ದು, ಅದನ್ನು ಸಾಕಾರಗೊಳಿಸಲು ಸಮಿತಿ ಎಚ್.ಎಂ.ರೇವಣ್ಣ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪದ್ಮನಾಭ ನಗರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಅನೇಕ ವಿಭಿನ್ನ ಅಭಿಯಾನದ ಮೂಲಕ ಜನರನ್ನು ತಲುಪಲಾಗುತ್ತಿದೆ ಎಂದರು.
ಸರಕಾರದ ಯೋಜನೆ ಮನೆಮನೆಗೆ ತಲುಪಬೇಕು: ಸರಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದಿರುವುದರಿಂದ ರಾಜ್ಯದ ಬಡವರ, ಮಧ್ಯಮ ವರ್ಗದ ಜೀವನ ಮಟ್ಟ ಸುಧಾರಣೆಯಾಗಿದೆ. ಅದರಲ್ಲೂ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಿದೆ ಎಂದು ಪ್ರಮೋದ್ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ರಾಜ್ಯದ ಜನರು ನೆಮ್ಮದಿಯಿಂದ ಬದುಕಬೇಕು ಎಂಬುದು ನಮ್ಮ ಸರಕಾರದ ಆಶಯ. ಆ ಆಶಯವನ್ನು ಈಡೇರಿಸುವುದು ಸಮಿತಿ ಅಧ್ಯಕ್ಷರಾಗಿ ನಮ್ಮೆಲ್ಲರ ಜವಾಬ್ದಾರಿ. ಅದರ ಭಾಗವಾಗಿ ನಾವೊಂದಿಷ್ಟು ವಿಭಿನ್ನ ಆಲೋಚನೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಯ ಲಾಭ ಸಿಗದಿರುವವರಿಗೆ ತಲುಪಿಸುವುದು ನಮ್ಮ ಗುರಿ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೃಷ್ಣಪ್ಪ, ಗಿರೀಶ್,ಪವನ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್