ಗದಗ : ಡಿ.9ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾದ ದಿನದಿಂದಲೂ ವಕ್ಫ್ ವಿವಾದ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರಗಳಷ್ಟೇ ಸದ್ದು ಮಾಡುತ್ತಿವೆ. ಉತ್ತರ ಕರ್ನಾಟಕ ಕುರಿತ ಸಮಸ್ಯೆಗಳು, ಅಭಿವೃದ್ಧಿ ವಿಚಾರವಾಗಿ ಚರ್ಚೆಯಾಗಬೇಕು ಎಂಬ ಮಾತುಗಳು ಸಾರ್ವಜನಿಕ ವಲಯಗಳಿಂದ ಕೇಳಿ ಬರುತ್ತಿವೆ.
ಇದರ ಬೆನ್ನಲ್ಲೇ ರೋಣ ಹೆಲಿಪ್ಯಾಡ್ನಲ್ಲಿ ಮಾಧ್ಯಮದವರಿಗೆ ಸಿಎಂ ಸಿದ್ದರಾಮಯ್ಯ ಅವರು ಸದನದ ಕಲಾಪ ಕುರಿತು ಪ್ರತಿಕ್ರಿಯೆ ನೀಡಿದ್ದು, ನಾಳೆಯಿಂದ ಅಧಿವೇಶನದ ಕಲಾಪಗಳು ಪುನಃ ಆರಂಭವಾಗಲಿದ್ದು, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
ಉ.ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಸೋಮವಾರದಿಂದ ಬುಧವಾರದವರೆಗೆ 3 ದಿನ ಆ ಭಾಗಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಕ್ಫ್ ವಿಚಾರದಲ್ಲಿ ಮೌನವಹಿಸುವಂತೆ ಈ ಹಿಂದೆ ರೂ.150 ಕೋಟಿ ಆಮಿಷದ ಒಡ್ಡಿದರು ಎಂಬ ಆರೋಪದ ಬಗ್ಗೆ ಇದೇ ವೇಳೆ ಉತ್ತರಿಸಿದ ಸಿಎಂ, ಅನ್ವರ್ ಮಾನಪ್ಪಾಡಿ ಅವರು ಅವರದ್ದೇ ವಿಡಿಯೋದಲ್ಲಿ ಆಮಿಷದ ಕುರಿತಾಗಿ ಆರೋಪ ಮಾಡಿದ್ದಾರೆ. ಅವರ ಹೇಳಿಕೆ ಆಧಾರದಲ್ಲೇ ನಾನು ಸಿಬಿಐ ತನಿಖೆಗೆ ನೀಡಬೇಕು ಎಂದು ಕೇಂದ್ರಕ್ಕೆ ಆಗ್ರಹಿಸಿದ್ದೆ ಎಂದು ಸ್ಪಷ್ಟನೆ ನೀಡಿದರು.