ರಾಮನಗರ: ಆಸ್ಪತ್ರೆಯ ಶೌಚಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಮೂಲದ ಜೋಡಿಯನ್ನು ಹಾರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಮೃತ ಕುಮಾರಿ (21) ಹಾಗೂ ಸುರೇಂದ್ರ ಮೆಹ್ರಾ (22) ಬಂಧಿತರು. ದಯಾನಂದ ಸಾಗರ ಆಸ್ಪತ್ರೆಯ ಶೌಚಗುಂಡಿಯಲ್ಲಿ ನವಜಾತ ಮಗುವಿನ ಶವ ಪತ್ತೆಯಾಗಿತ್ತು.
ಈ ಸಂಬಂಧ ದಯಾನಂದ ಸಾಗರ ಆಸ್ಪತ್ರೆ ವೈದ್ಯರು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ತನಿಖೆ ನಡೆಸಿದ್ದ ಪೊಲೀಸರು ಇದೀಗ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾರೋಹಳ್ಳಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡ್ತಿದ್ದ ಯುವಕ ಹಾಗೂ ಯುವತಿ ಕಳೆದ ಎರಡು ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದರು.
ಗರ್ಭಿಣಿ ಆಗಿದ್ದ ಯುವತಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಟಾಯ್ಲೆಟ್‍ನಲ್ಲಿ ಮಗು ಜನಿಸಿದೆ. ಬಳಿಕ ಇಬ್ಬರೂ ಸೇರಿ ಯಾರಿಗೂ ತಿಳಿಯದಂತೆ ಶಿಶುವನ್ನು ಟಾಯ್ಲೆಟ್ ಕಮೋಡ್‍ಗೆ ಹಾಕಿ ಫ್ಲಶ್ ಮಾಡಿ ಎಸ್ಕೇಪ್ ಆಗಿದ್ದರು.
ಇತ್ತ ಶೌಚಾಲಯ ಬ್ಲಾಕ್ ಆಗಿದ್ದ ಪರಿಣಾಮ ಆಸ್ಪತ್ರೆ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಶೌಚಗುಂಡಿಯಲ್ಲಿ ಮಗು ಪತ್ತೆಯಾಗಿತ್ತು. ಬಳಿಕ ಪೊಲೀಸರು ಸಿಸಿಟಿವಿ ವಿಡಿಯೋ ಆಧರಿಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.