Ad imageAd image

ವ್ಯಾಸಂಗಕ್ಕೆ ನೆರವು ನೀಡಿದ ಶಾಸಕ ಎಂ.ಟಿ.ಕೃಷ್ಣಪ್ಪನವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದ ವಿನುತಶ್ರೀನಿತ್ಯಾನಂದ್

Bharath Vaibhav
ವ್ಯಾಸಂಗಕ್ಕೆ ನೆರವು ನೀಡಿದ ಶಾಸಕ ಎಂ.ಟಿ.ಕೃಷ್ಣಪ್ಪನವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದ ವಿನುತಶ್ರೀನಿತ್ಯಾನಂದ್
WhatsApp Group Join Now
Telegram Group Join Now

ತುರುವೇಕೆರೆ: ವಿದ್ಯಾಬ್ಯಾಸಕ್ಕೆ ಅಗತ್ಯ ಧನಸಹಾಯ ಮಾಡಿ, ಉನ್ನತ ವ್ಯಾಸಂಗಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿಕೊಟ್ಟು ಉನ್ನತ ಸ್ಥಾನ ಸಂಪಾದಿಸಲು ನೆರವಾದ ಶಾಸಕ ಎಂ.ಟಿ.ಕೃಷ್ಣಪ್ಪನವರನ್ನು ತಾಲೂಕಿನ ಕೊಡಗೀಹಳ್ಳಿ ಗ್ರಾಮದ ವಿನುತಶ್ರೀ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಇಂದು ಶಾಸಕರ ಗೃಹ ಕಛೇರಿಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರನ್ನು ಭೇಟಿ ಮಾಡಿದ ವಿನುತಶ್ರೀ ನಿತ್ಯಾನಂದ್ ದಂಪತಿಗಳು ಶಾಸಕರ ನೆರವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದ್ದಲ್ಲದೆ ಶಾಸಕರಿಗೆ ಹಾರ ಹಾಕಿ ಶಾಲು ಹೊದಿಸಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಲಿ ಎಂಬ ಆಶಯದಿಂದ ತಾಲೂಕಿನಲ್ಲಿ ಎಲ್ಲಾ ರೀತಿಯ ಶಿಕ್ಷಣಕ್ಕೂ ಅನುಕೂಲ ಕಲ್ಪಿಸಿದ್ದೇನೆ. ಹಳ್ಳಿಗಾಡಿನ ಹೆಣ್ಣುಮಗಳೊಬ್ಬಳು ಉತ್ತಮವಾಗಿ ಅಧ್ಯಯನ ಮಾಡಿ ಉನ್ನತ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆದು, ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಯನ್ನು ಪಡೆದುಕೊಂಡಿರುವುದು ಬಹಳ ಸಂತೋಷ ತಂದಿದೆ. ಈ ಹೆಣ್ಣುಮಗಳ ಸಾಧನೆ ಮತ್ತಷ್ಟು ಮಂದಿಗೆ ಸ್ಪೂರ್ತಿಯಾಗಿ, ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆದು ತಾಲೂಕಿಗೆ ಕೀರ್ತಿ ತರಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿನುತಶ್ರೀ, ಸರ್ಕಾರಿ ಪಪೂ ಕಾಲೇಜಿನಲ್ಲಿ ಪಿಯುಸಿಯಲ್ಲಿ ಉನ್ನತ ಶ್ರೇಣಿ ಹಾಗೂ ಉದಯಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದ ನನಗೆ ಉನ್ನತ ಶಿಕ್ಷಣ ಎಂಬಿಎ ಮಾಡಬೇಕೆನ್ನುವ ಆಶಯವಿದ್ದರೂ ಅದಕ್ಕೆ ಬೇಕಾದ ಹಣಕಾಸಿನ ಸಂಪನ್ಮೂಲವಾಗಲೀ, ಸೌಕರ್ಯವಾಗಲೀ ಬಡತನದ ಬೇಗೆಯಲ್ಲಿದ್ದ ನನ್ನ ಕುಟುಂಬಕ್ಕೆ ಭರಿಸಲು ಸಾಧ್ಯವಿರಲಿಲ್ಲ. ಈ ಸಂದರ್ಭದಲ್ಲಿ ನನ್ನ ತಂದೆಯೊಂದಿಗೆ ಶಾಸಕರನ್ನು ಭೇಟಿ ಮಾಡಿ ಶಿಕ್ಷಣ ಮುಂದುವರೆಸಬೇಕೆನ್ನುವ ಆಶಯ ಹಾಗೂ ಅದಕ್ಕೆ ಅಡ್ಡಿಯಾಗಿರುವ ನಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಶಾಸಕ ಎಂ.ಟಿ.ಕೃಷ್ಣಪ್ಪನವರು ತುಂಬು ಮನಸ್ಸಿನಿಂದ ಶಿಕ್ಷಣ ಮುಂದುವರೆಸುವಂತೆ, ಅದಕ್ಕೆ ಬೇಕಾದ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದರು ಎಂದರು.

2016-17ರಲ್ಲಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಶಿಕ್ಷಣಕ್ಕೆ ದಾಖಲಾದಾಗ ಕಾಲೇಜು ಶುಲ್ಕದ ಶೇ.೫೦ರಷ್ಟು ಹಣವನ್ನು ಹಾಗೂ ಹಾಸ್ಟೆಲ್ನಲ್ಲಿ ಉಳಿದುಕೊಳ್ಳಲು ಅಗತ್ಯ ವ್ಯವಸ್ಥೆಯನ್ನು ಶಾಸಕರು ಮಾಡಿಕೊಟ್ಟಿದ್ದರು. ಇದರಿಂದ ನನಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಎಂಬಿಎ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಶಾಸಕರು ನನ್ನ ಮೇಲಿಟ್ಟ ಭರವಸೆಯನ್ನು ಉಳಿಸಿಕೊಂಡಿದ್ದೇನೆಂಬ ತೃಪ್ತಿ ನನಗಿದೆ. ಉನ್ನತ ಶಿಕ್ಷಣದ ನಂತರ 2021 ರಲ್ಲಿ ನಡೆದ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿ ಈಗ ಪ್ರಸ್ತುತ ದಕ್ಷಿಣಕನ್ನಡ ಜಿಲ್ಲೆ ಬೆಳ್ಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಈ ಯಶಸ್ಸಿಗೆ ಪ್ರಮುಖ ಕಾರಣರಾದ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ನಾನು ಮತ್ತು ನನ್ನ ಕುಟುಂಬ ಎಂದಿಗೂ ಚಿರಋಣಿಯಾಗಿರುತ್ತೇವೆ ಎಂದರು.

ವಿದ್ಯಾಬ್ಯಾಸ ಹಂತದಲ್ಲಿ ಶಾಸಕ ಎಂ.ಟಿ. ಕೃಷ್ಣಪ್ಪನವರ ನೆರವು, ಉದಯಭಾರತಿ ಪ್ರಥಮ ದರ್ಜೆ ಕಾಲೇಜಿನ ಅಂದಿನ ಪ್ರಾಂಶುಪಾಲರಾದ ಗಂಗಾಧರ ದೇವರಮನೆ, ಕನ್ನಡ ಉಪನ್ಯಾಸಕರಾಗಿದ್ದ ರಾಘವೇಂದ್ರ ಅವರ ಮಾರ್ಗದರ್ಶನ, ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿ ಪರೀಕ್ಷೆ ಸಂದರ್ಭದಲ್ಲಿ ಪತಿ ನಿತ್ಯಾನಂದ್, ಪೋಷಕರಾದ ನಾಗರತ್ನ, ಬೋರೇಗೌಡರು ಹಾಗೂ ಅತ್ತೆ, ಮಾವನ ಸಹಕಾರವನ್ನು ನಾನೆಂದಿಗೂ ಮರೆಯುವಂತಿಲ್ಲ, ಅವರೆಲ್ಲರ ಸಹಕಾರದಿಂದ ಯಶಸ್ಸನ್ನು ಸಾಧಿಸಲು ಸಾಧ್ಯವಾಗಿದೆ ಎಂದು ಭಾವುಕರಾದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!